ಮುಖಪುಟ /ಸಾಧಕರು    

ಸಾಧನೆಗಳ ಸರದಾರ ಕರ್ನಾಟಕದ ಕಣ್ಮಣಿ ಕುಂಬ್ಳೆ
ಭಾರತೀಯ ಟೆಸ್ಟ್ ಕ್ರಿಕೆಟ್ ಗೆ ಹೊಸ ಭಾಷ್ಯ ಬರೆದ ಮಹಾನ್ ಸಾಧಕ

*ಟಿ.ಎಂ.ಸತೀಶ್

ಆತ್ಮೀಯರ ವಲಯದಲ್ಲಿ ಜಂಬೋ ಎಂದೇ ಖ್ಯಾತವಾಗಿರುವ ಅನಿಲ್ ಕುಂಬ್ಳೆ ಸಭ್ಯರ ಕ್ರೀಡೆ ಎಂದೇ ಖ್ಯಾತವಾದ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಹಾಗೂ ಸಭ್ಯ ಕ್ರಿಕೆಟ್ ಪಟು.

ಟೆಸ್ಟ್ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ  (೧೯೯೯ರ ಫೆಬ್ರವರಿ ೭ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ) ಎಲ್ಲ ೧೦ ವಿಕೆಟ್ ಪಡೆದ ಸಾಧನೆ ಮೆರೆದು ಇಂಗ್ಲೆಂಡ್‌ನ ಜಿಮ್ ಲೇಖರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ 18 ವರ್ಷಗಳ ತಮ್ಮ ಸುದೀರ್ಘ ಟೆಸ್ಟ್ ಜೀವನದಲ್ಲಿ ಮಾಡಿರುವ ಸಾಧನೆಗಳು ನೂರಾರು.

 ಟೆಸ್ಟ್ ಕ್ರಿಕೆಟ್‌ನಲ್ಲಿ  ಕಪಿಲ್‌ದೇವ್ (434 ವಿಕೆಟ್) ಸಾಧನೆ ಅಳಿಸಿನಿಂತ ನೀಳಕಾಯದ ಅನಿಲ್ ಕುಂಬ್ಳೆ ಬೆಳೆದ ಎತ್ತರ ಎಲ್ಲರನ್ನೂ ಅಚ್ಚರಿಪಡಿಸುವಂಥದ್ದು. 132 ಟೆಸ್ಟ್ ಗಳಲ್ಲಿ ಒಟ್ಟು 619 ವಿಕೆಟ್ ಕಬಳಿಸಿರುವ ಜಂಬೋ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ನಂತರ 600ಕ್ಕೂ ಹೆಚ್ಚು ವಿಕೆಟ್ ಪಡೆದ ಮೂರನೇ ವಿಶ್ವಶ್ರೇಷ್ಠ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮಿಗಿಲಾಗಿ 6೦೦ಕ್ಕೂ ಹೆಚ್ಚು ವಿಕೆಟ್ ಪಡೆದ  ಸಾಧನೆ ಮಾಡಿದ ಮೊಟ್ಟ ಮೊದಲ ಭಾರತೀಯ ಸ್ಪಿನ್ ಬೌಲರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

 ಕುಂಬ್ಳೆ ೧೦೦ನೇ ವಿಕೆಟ್೩೦೦ ಹಾಗೂ ಈಗ ೪೦೦ನೇ ವಿಕೆಟ್ ಅನ್ನು ತವರೂರು ಬೆಂಗಳೂರಿನಲ್ಲೇ ಪಡೆದ ಸಾಧನೆಯನ್ನೂ ಮಾಡಿದ್ದಾರೆ.

  ಅಸಾಧಾರಣ ಬೌಲರ್: 1990ರಲ್ಲಿ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗ ಪ್ರವೇಶಿಸಿದ ಕುಂಬ್ಳೆ, ೧೯೯೦ರಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡಿದರು.

ಎತ್ತರದ ನಿಲುವಿನ ಕನ್ನಡಕಧಾರಿ ಕುಂಬ್ಳೆ (ಈಗ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ) ತಮ್ಮದೇ ಆದ ಶೈಲಿಯ ಗೂಗ್ಲಿ ಹಾಗೂ ಅರ್ಥೋಡಾಕ್ಸ್  ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿ ಕಾಡಿದವರು. ತಮ್ಮ ಲೆಗ್‌ಸ್ಪಿನ್ ಮೋಡಿಯಿಂದಲೇ ಹಲವಾರು ಪಂದ್ಯಗಳನ್ನು ಭಾರತಕ್ಕೆ ಗೆದ್ದುಕೊಟ್ಟ ಶ್ರೇಯವೂ ಕುಂಬ್ಳೆ ಅವರಿಗೆ ಸಲ್ಲುತ್ತದೆ.

1970 ಅಕ್ಟೋಬರ್ 17ರಂದು ಜನಿಸಿದ 38 ವರ್ಷದ ಕುಂಬ್ಳೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಜುಂಬೋ ಎಂದೇ ಖ್ಯಾತರು. ಜುಂಬೋ ಅವರಿಗಿರುವ ಅಡ್ಡಹೆಸರು ಅರ್ಥಾತ್ ನಿಕ್‌ನೇಮ್. ವಾಸ್ತವವಾಗಿ ಮೀಡಿಯಂ ಪೇಸರ್ ಆಗಿ ಬಂದರಾದರೂ ಅವರನ್ನು ಕ್ರಿಕೆಟ್ ರಂಗದಲ್ಲಿ ಸ್ಥಿರವಾಗಿ ನಿಲ್ಲಿಸಿದ್ದು ಸ್ಪಿನ್ ಮೋಡಿ.  1997ರಲ್ಲಿ ತಂಡದಿಂದ ಕೈಬಿಡಲಾಗಿತ್ತು. ಆದರೆ, ಛಲದಿಂದ ಸತತ ಪರಿಶ್ರಮದಿಂದ ಮತ್ತೆ ಸ್ಥಾನಗಿಟ್ಟಿಸಿದ ಕುಂಬ್ಳೆ ಮತ್ತೆ 1998ರಲ್ಲಿ  ಅತ್ಯುತ್ತಮವಾಗಿ ಬೌಲ್ ಮಾಡಿ ತಂಡದಲ್ಲಿ ತಮ್ಮ  ಸ್ಥಾನ ಗಟ್ಟಿ ಮಾಡಿಕೊಂಡರು.

 ಕೆಳ ಹಂತದ ನಂಬಿಕೆಗೆ ಅರ್ಹರಾದ ಬ್ಯಾಟ್ಸ್‌ಮನ್ ಆಗಿ, ಉತ್ತಮ ಫೀಲ್ಡರ್ ಆಗಿ, ವಿಶ್ವಾಸಾರ್ಹ ಹಾಗೂ ಭಾರತದ ಪಾಲಿಗೆ ಪಂದ್ಯ ಗೆಲ್ಲಿಸಬಲ್ಲ ಬೌಲರ್ ಆಗಿ ಕುಂಬ್ಳೆ ವಿಶ್ವಾಸಾರ್ಹತೆ ಪಡೆದರು. ಕುಂಬ್ಳೆಯವರಷ್ಟು ಪಂದ್ಯಗೆಲ್ಲಿಸಿದ ಯಶಸ್ವಿ ಬೌಲರ್ ಭಾರತ ತಂಡದಲ್ಲಿ ಮತ್ತೊಬ್ಬರಿಲ್ಲ ಎಂಬುದು ಖಂಡಿತಾ ಅತಿಶಯೋಕ್ತಿಯ ಮಾತಲ್ಲ.

 ಸಾಮಾನ್ಯವಾಗಿ ಸ್ವದೇಶದಲ್ಲಿ ಮಿಂಚುವ ಕುಂಬ್ಳೆ, ವಿದೇಶೀ ನೆಲದಲ್ಲಿ  ಪರಿಣಾಮಕಾರಿ ಬೌಲರ್ ಅಲ್ಲ ಎಂಬ ಟೀಕಾಕಾರ ಟೀಕೆಗಳಿಗೆ 2003-04 ಮತ್ತು 2006-07ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಕ್ಕ ಉತ್ತರ ನೀಡಿದರು. 2005-04ರ ಟೆಸ್ಟ್ ಪ್ರವಾಸದಲ್ಲಿ  ಮೂರು ಟೆಸ್ಟ್ ಪಂದ್ಯಗಳಲ್ಲಿ ೨೪ ವಿಕೆಟ್ ಪಡೆದು ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

 ಇದಾದ ಮೂರೇ ತಿಂಗಳಲ್ಲಿ ಮುಲ್ತಾನ್‌ನಲ್ಲಿ ಕೇವಲ 71ರನ್ ನೀಡಿ 6 ವಿಕೆಟ್ ಕಬಳಿಸಿದ ಕುಂಬ್ಳೆ ಪಾಕ್ ನೆಲದಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಕ್ರಿಕೆಟ್ ಜಯ ತಂದುಕೊಟ್ಟರು. 2001ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಟೆಸ್ಟ್ ಜೀವನದ 300ನೇ ವಿಕೆಟ್ ಪಡೆದ ಕುಂಬ್ಳೆ, 300 ವಿಕೆಟ್ ಪಡೆದ ಮೊಟ್ಟ ಮೊದಲ ಭಾರತೀಯ ಸ್ಪಿನ್ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಇದಾದ ಮೂರು ವರ್ಷಗಳ ಒಳಗೇ ಮತ್ತೆ 1೦೦ ವಿಕೆಟ್ ಉರುಳಿಸಿದ ಕುಂಬ್ಳೆ ಈಗ 4೦೦, 500 ಹಾಗೂ 600 ವಿಕೆಟ್ ಪಡೆದು ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ ಸರದಾರರಾದರು.

35 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿರುವ ಕುಂಬ್ಳೆ, 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದು ಯಾವುದೇ ರೀತಿಯ ಕ್ರಿಕೆಟ್ ಗೂ ತಾವು ಸೈ ಎಂಬು ಸಾಬೀತು ಪಡಿಸಿದರು. ತಮ್ಮ ಈ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿದ ಕುಂಬ್ಳೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಸಭ್ಯ ನಡವಳಿಕೆ ಹಾಗೂ ಕ್ರೀಡಾ ಮನೋಭಾವದಿಂದ ವಿಶ್ವದ ಎಲ್ಲ ಕ್ರಿಕೆಟಿಗರ ಗೌರವಕ್ಕೂ ಪಾತ್ರರಾಗಿದ್ದಾರೆ. ತಮ್ಮ ಮನೆಗೆ ಕ್ರೀಡಾ ಎಂದು ಹೆಸರು ಇಟ್ಟಿರುವ ಕುಂಬ್ಳೆ ವಿಶ್ವವೇ ಮೆಚ್ಚಿದ ಶ್ರೇಷ್ಠ ಹಾಗೂ ಸಭ್ಯ ಕ್ರಿಕೆಟಿಗ

ಮುಖಪುಟ /ಸಾಧಕರು