|
ಡಾ.ಯು.ಆರ್. ಅನಂತಮೂರ್ತಿ ಎಂಬ ಆಲದಮರ * ಟಿ.ಎಂ.ಸತೀಶ್
ಅನಂತ ಮೂರ್ತಿ ಅವರ ತಮ್ಮ ಬರಹ ಹಾಗೂ ಸೂಜಿಗಲ್ಲಿನಂತ ವ್ಯಕ್ತಿತ್ವದಿಂದ ಸಾಹಿತ್ಯಾಸಕ್ತರೆಲ್ಲರಿಗೂಅತ್ಯಂತ ಆತ್ಮೀಯರಾಗಿದ್ದಾರೆ. ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಅನಂತಮೂರ್ತಿ ಬಹುಮುಖ ಪ್ರತಿಭೆಯ ಮಂತ ಲೇಖಕ. ಅತ್ಯುತ್ತಮ ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಪತ್ರಕರ್ತ (ಋಜುವಾತು ತ್ರೈಮಾಸಿಕ) ಕವಿ. ಅನಂತಮೂರ್ತಿ ಅವರು ಹುಟ್ಟಿದ್ದು ೧೯೩೨ರ ಡಿಸೆಂಬರ್ ೨೧ರಂದು. ಹುಟ್ಟೂರು ತೀರ್ಥಹಳ್ಳಿಯ ಮೇಳಿಗೆ. ತಂದೆ ರಾಜಗೋಪಾಲಾಚಾರ್‍ಯ, ತಾಯಿ ಸತ್ಯಭಾಮ. ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೂರ್ತಿಯವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು, ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ (ರಾಜಕಾರಣ ಮತ್ತು ಕಥೆ -ಕಾದಂಬರಿ) ಪಿಎಚ್‌ಡಿ ಪದವಿ ಪಡೆದರು. ಶಿವಮೊಗ್ಗ, ಹಾಸನ, ಮೈಸೂರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ ಅವರು, ೧೯೮೭ರ ಜುಲೈನಲ್ಲಿ ಕೇರಳದ ಕೊಟ್ಟಾಯಂನ ಗಾಂ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡು, ಕಾಲೇಜು ಶಿಕ್ಷಣದಲ್ಲಿ ಹಲವು ಸುಧಾರಣೆಗಳನ್ನು ತಂದರು. ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ ಪ್ರಕಾಶನ ಉದ್ಯಮಕ್ಕೆ ಹೊಸ ಆಯಾಮವನ್ನೇ ನೀಡಿದವರು. ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನವನ್ನೂ ಅಲಕಂರಿಸಿದ್ದ, ಡಾ.ಮೂರ್ತಿ, ೨೦೦೨ರ ಫೆಬ್ರವರಿಯಲ್ಲಿ ತುಮಕೂರಿನಲ್ಲಿ ನಡೆದ ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿವಾದಗಳ ನಡುವೆ, ಭಾರಿ ಸುದ್ದಿಯನ್ನೂ ಮಾಡಿದರು. ವಿವಿಧ ರಾಷ್ಟ್ರಗಳನ್ನು ಸುತ್ತಿ, ಕೋಶವನ್ನು ಓದಿ ತಮ್ಮ ದೀರ್ಘಾನುಭವ ಹಾಗೂ ಕಲ್ಪನೆಗಳನ್ನು ಕೃತಿಗಳಿಸಿರುವ ಮೂರ್ತಿ ಅವರ ಕೃತಿಗಳನ್ನು ಓದುವುದೇ ಒಂದು ಆನಂದ. ಪದ್ಮಭೂಷಣ, ಜ್ಞಾನಪೀಠ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹಲವು ಹತ್ತು ಪ್ರಶಸ್ತಿಗಳಿಗೆ ಭಾಜನರಾಗಿರುವ ಮೂರ್ತಿ ಅವರದು, ಆಕರ್ಷಕ ವ್ಯಕ್ತಿತ್ವ. ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹರಿಸಿದ ವಿಚಾರ ಧಾರೆ, ೨೫ ಪುಟಗಳ ವಿಚಾರಪೂರ್ಣ ಭಾಷಣ, ಕನ್ನಡ - ಕನ್ನಡಿಗರ ಬಗ್ಗೆ ಮೂರ್ತಿಯವರಿಗಿರುವ ಕಳಕಳಿಯನ್ನು ಬಿಂಬಿಸಿತು. ಸುಲಿದ ಬಾಳೆಯ ಹಣ್ಣಿನಂದದಿ... ಸರಳ ಸುಂದರ ಕನ್ನಡದಲ್ಲಿ ಕಂಚಿನ ಕಂಠದಿಂದ ಹೊರಹೊಮ್ಮಿದ ಆ ಅಸ್ಖಲಿತ ಭಾಷಣ ಮೂರ್ತಿಯವರು ಅಪ್ರತಿಮ ವಾಗ್ಮಿ ಎಂಬುದನ್ನು ನಿರೂಪಿಸಿದ್ದಲ್ಲದೆ, ಅವರ ವಿಚಾರಧಾರೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಟೀಕೆ ಮಾಡಿದ್ದ ಟೀಕಾಕಾರರ ಬಾಯನ್ನೂ ಮುಚ್ಚಿಸಿತ್ತು. ಅನಂತ ಮೂರ್ತಿ ಕನ್ನಡ ಸಾರಸ್ವತ ಲೋಕದಲ್ಲಿ ಅತಿ ಎತ್ತರಕ್ಕೆ ಬೆಳೆದ ಬೃಹತ್ ಆಲದ ಮರ. ಕೃತಿಗಳು: ಸಂಸ್ಕಾರ, ಭಾರತೀಪುರ, ಎಂದೆಂದೂ ಮುಗಿಯದ ಕಥೆ, ದಿವ್ಯ, ಪ್ರಶ್ನೆ, ಮೌನಿ, ಅವಸ್ಥೆ, ಪ್ರಜ್ಞೆ ಮತ್ತು ಪರಿಸರ, ಅವಾಹನೆ, ಘಟಶ್ರಾದ್ಧ, ಬರ, ಆಕಾಶ ಮತ್ತು ಬೆಕ್ಕು, ಸಮಕ್ಷಮ, ಪೂರ್ವಾಪರ, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇತ್ಯಾದಿ. | |||