|
2008 ಕನ್ನಡ ಚಿತ್ರೋದ್ಯಮದ ಸಿಂಹಾವಲೋಕನ
ಬಹುತೇಕ ಪ್ರಕಟಿತ ವರದಿಗಳ ರೀತ್ಯ ಈ ಬಾರಿ ಕನ್ನಡ ಚಿತ್ರರಂಗ ಭಾರೀ ಸೋಲು ಅನುಭವಿಸಿವೆ. 2008ರಲ್ಲಿ ಬಿಡುಗಡೆಯಾದ 115 ಚಿತ್ರಗಳ ಪೈಕಿ 100 ದಿನ ಓಡಿದ ಚಿತ್ರಗಳು ಗಾಳಿಪಟ, ಗಜ, ನಂದ ನಂದಿತ, ಅರಮನೆ, ಮೊಗ್ಗಿನ ಮನಸ್ಸು, ತಾಜಮಹಲ್ ಹಾಗೂ ಬುದ್ಧಿವಂತ. 50 ದಿನ ಓಡಿದ್ದು ಮುಸ್ಸಂಜೆ ಮಾತು, ಇಂದ್ರ, ಮಿಸ್ಟರ್ ಗರಗಸ, ಬಿಂದಾಸ್, ಸತ್ಯ ಇನ್ ಲವ್ ಹಾಗೂ ವಂಶಿ ಮಾತ್ರ. ಉಳಿದ ಚಿತ್ರಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದಕ್ಕೆ ಕಾರಣ ಏನು? ಯಾವುದೇ ಗೆಲುವಿಗೆ ಯಾವುದೇ ಸೋಲಿಗೆ ಒಂದು ಕಾರಣ ಇರತ್ತೆ. ಕನ್ನಡ ಚಿತ್ರರಂಗದಲ್ಲಿ 2008ರಲ್ಲಿ ಸೆನ್ಸಾರ್ ಆದ 152 ಚಿತ್ರಗಳ ಪೈಕಿ 15 ಸಿನಿಮಾಗಳು ಮಾತ್ರ ಗೆದ್ದವೆಂದರೆ ಕೇವಲ ಶೇ.10ರಷ್ಟು ಯಶಸ್ಸು ಮಾತ್ರ ದಾಖಲಾಗಿದೆ. ಹಾಗಾದರೆ ಶೇ.90ರಷ್ಟು ಚಿತ್ರಗಳ ಸೋಲಿಗೆ ಕಾರಣ ಏನು?
ಪರಭಾಷಾ ಚಿತ್ರಗಳು ಸಾಲು ಸಾಲು ಗೆಲುವು ಕಾಣುತ್ತಿರುವಾಗ ಕನ್ನಡ ಚಿತ್ರಗಳು ಏಕೆ ಸೋಲಬೇಕು. ಕನ್ನಡ ಚಿತ್ರರಸಿಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಕೆಲಸ ಆಗಬೇಕು. 2008ರಲ್ಲಿ ನಿರ್ದೇಶಕ ಯೋಗರಾಜಭಟ್ ಗಾಳಿಪಟ ಚಿತ್ರದ ನಿರ್ದೇಶನಕ್ಕಾಗಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದು ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದರು. ಹಲವು ಹಳೆಯ ಹುಲಿಗಳೇ ಮುಗ್ಗರಿಸಿದರು. ಹೊಸಬರು ಚಿತ್ರ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡರು. ನಾಯಕ ನಟಿಯರ ಪೈಕಿ ಪೂಜಾ ಗಾಂಧೀ ಮಿಂಚಿದರು, ನಾಯಕ ನಟರಾದ ದರ್ಶನ್, ಗಣೇಶ್, ಪುನೀತ್ ರಾಜ್ ಕುಮಾರ್, ವಿಜಯರಾಘವೇಂದ್ರ, ಶಿವರಾಜ್ ಕುಮಾರ್, ಉಪೇಂದ್ರ, ರಮೇಶ್ ಅರವಿಂದ್ ಬಹುತೇಕ ಸಮಾನ ಗೌರವಕ್ಕೆ ಪಾತ್ರರಾದರು. ಆದಾಗ್ಯೂ ದರ್ಶನ್ ಕೈ ತುಸು ಮೇಲಾಯ್ತು ಎಂಬುದು ಮೇಲ್ನೋಟಕ್ಕೆ ಕಂಡ ದೃಶ್ಯ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ಬಾರಿ ಬೆಲ್ಲಕ್ಕಿಂತ ಬೇವೇ ಹೆಚ್ಚಾಗಿತ್ತು. ಮುಂದಿನ ಸಲವಾದರೂ ಕಹಿ ಕಡಿಮೆಯಾಗಿ ಸಿಹಿ ಹೆಚ್ಚಲೆಂದು ಹಾರೈಸೋಣ. | |||