|
ಗುಲಾಬಿ ಟಾಕೀಸ್ ಅತ್ಯುತ್ತಮ ಚಿತ್ರ, ಡಾ.ವಿಷ್ಣುಗೆ ಡಾ.ರಾಜ್ ಪ್ರಶಸ್ತಿ
ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಮೊಗ್ಗಿನ ಜಡೆಗೆ ದೊರೆತಿದ್ದರೆ, ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಾತಾಡ್ ಮಾತಾಡ್ ಮಲ್ಲಿಗೆಗೆ ಬಂದಿದೆ. ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಉಮಾಶಂಕರ ಸ್ವಾಮಿ ಅವರ ಬನದ ನೆರಳು ಪಡೆದುಕೊಂಡಿದೆ. ಅತ್ಯುತ್ತಮ ನಟರಿಗೆ ನೀಡುವ ಸುಬ್ಬಯ್ಯ ನಾಯ್ಡು ಪ್ರಶಸ್ತಿಗೆ ಮಿಲನ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ ಪಡೆದಿದ್ದರೆ, ಗುಲಾಬಿ ಟಾಕೀಸ್ ಅಭಿನಯಕ್ಕಾಗಿ ನಟಿ ಉಮಾಶ್ರೀ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜೇಶ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರೆ, ಅವ್ವ ಚಿತ್ರದ ಅಭಿನಯಕ್ಕಾಗಿ ಸ್ಮಿತಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಗೀತ ರಚನೆಕಾರ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ್ (ಹಾಡು: ಝಣಝಣ ಕಾಂಚನದಲ್ಲಿ) (ಚಿತ್ರ: ಮಾತಾಡ್ ಮಾತಾಡ್ ಮಲ್ಲಿಗೆ) ಪಡೆದಿದ್ದರೆ, ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಎಸ್.ಪಿ.ಬಾಲಸುಬ್ರಮಣ್ಯಮ್ , ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ವಾಣಿ ಪಾತ್ರರಾಗಿದ್ದಾರೆ. ದಿ.ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ರೇಣುಕಾ ಶರ್ಮ ಪಡೆದಿದ್ದರೆ, ಪ್ರತಿಷ್ಠಿತ ಡಾ|| ರಾಜ್‌ಕುಮಾರ್ ಪ್ರಶಸ್ತಿಗೆ ಡಾ||ವಿಷ್ಣುವರ್ಧನ್ ಭಾಜನರಾಗಿದ್ದಾರೆ.
ಶ್ರೀ ಕೇಸರಿ ಹರವು ಅಧ್ಯಕ್ಷತೆಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯು ಸಚಿವರಿಗೆ ಶಿಫಾರಸ್ಸನ್ನು ಸಲ್ಲಿಸಿದ ನಂತರ ಸಚಿವರು ಈ ಪ್ರಶಸ್ತಿಗಳನ್ನು ಘೋಷಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಶ್ರೀ ಬಿ.ಆರ್. ಜಯರಾಮರಾಜೇ ಅರಸ್, ವಾರ್ತಾ ಇಲಾಖೆ ನಿರ್ದೇಶಕ ಶ್ರೀ ಎನ್.ಆರ್. ವಿಶುಕುಮಾರ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು. | |||