|
ದಸರಾ ಎಂದರೆ ಮೈಸೂರು ಸೀಮೆಯ ಬೊಂಬೆ ಹಬ್ಬ *ಶೋಭಾ ಎನ್. ಸತೀಶ್
ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಸರಣಿಯೇ ದಸರಾ. ದಸರೆಗೆ ವಾಸ್ತವವಾಗಿ ಖ್ಯಾತಿ ಬಂದಿದ್ದೇ ಮೈಸೂರಿನಿಂದ. ಮೈಸೂರು ಸಂಪ್ರದಾಯದ ದಸರೆಯ ವೈಭವ ಮತ್ತೆಲ್ಲೂ ಕಾಣಲು ಸಾಧ್ಯವೇ ಇಲ್ಲ. ಶರದೃತುವಿನ ಮೊದಲ ದೊಡ್ಡ ಹಬ್ಬವೇ ದಸರೆ. ದಸರೆಗೆ ದಶಹರ, ದಶರಾತ್ರಿ, ನವರಾತ್ರಿ, ಶರನ್ನವರಾತ್ರಿ ಎಂಬ ಹೆಸರೂ ಉಂಟು. ಮೈಸೂರು ಪ್ರಾಂತದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎಂದು ತಿಳಿದಿದ್ದ ಕಾರಣ, ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಿದ್ದುದು ವಾಡಿಕೆ. ನವವಿವಾಹಿತರಿಗೆ ವರಪೂಜೆಯ ಕಾಲದಲ್ಲೇ ಪಟ್ಟದ ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಕರ್ನಾಟಕದಲ್ಲಿದೆ. ಈ ಬೊಂಬೆಗಳನ್ನು ಹಾಗೂ ಇದರೊಂದಿಗೆ ಹಲವು ಬಗೆಯ ಬೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ, ಪ್ರತಿ ಸಂಜೆ ಆರತಿ ಮಾಡಿ ಬೊಂಬೆ ಬಾಗಿನ ನೀಡುವುದೂ ಸಂಪ್ರದಾಯಗಳಲ್ಲೊಂದು. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ದಸರೆ ಬೊಂಬೆಹಬ್ಬ ಎಂದೇ ಖ್ಯಾತಿ. ಸಂಜೆ ಕೋಲಾಟವೂ ಈ ಹಬ್ಬದ ವಿಶೇಷಗಳಲ್ಲೊಂದು. ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳ ಕೂರಿಸಿ ಪೂಜಿಸಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದ ಕೆಲವರು ಶಾರದೆಯ ಹಬ್ಬದಿಂದ ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ. ಕಾಳಿಕಾ ಪುರಾಣದಲ್ಲಿ ಹೇಳಿರುವಂತೆ ಮೈಸೂರು ಸೀಮೆಯಲ್ಲಿ ಹಬ್ಬದ ಆಚರಣೆ ನಡೆಯುತ್ತದೆ. | |||