|
ನಾರಿಯರೆಲ್ಲರು ಸಂಭ್ರಮಿಸುವ ನಾಡಿನ ದೊಡ್ಡ ಹಬ್ಬ ‘ ನಾಗರ ಪಂಚಮಿ’ನಾಗರಪಂಚಮಿ. ನಾಡಿಗೂ, ನಾರಿಯರಿಗೂ ದೊಡ್ಡ ಹಬ್ಬವಾದ ನಾಗರಪಂಚಮಿಯ ಅಚರಣೆಯ ಬಗ್ಗೆ ವಿಚಾರಪೂರ್ಣ ಲೇಖನ... *ಟಿ.ಎಂ.ಸತೀಶ್
ಶ್ರಾವಣ ಮಾಸದಲ್ಲಿ ಅದೂ ಐದನೇ ದಿನವೇ ಏಕೆ ಹಾಲೆಯರಬೇಕು? ಇದನ್ನು ಸಹೋದರ, ಸಹೋದರಿಯರ ಹಬ್ಬ ಎಂದು ಏಕೆ ಕರೆಯುತ್ತಾರೆ? ಅಂದು ತುಪ್ಪ ಅಥವಾ ಎಣ್ಣೆಯಿಂದ ಕರಿದ ತಿಂಡಿ-ತಿನಿಸು ಏಕೆ ಮಾಡುವುದಿಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ. ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿ ಇರುವ ಮಾಸವೇ ಶ್ರಾವಣ. ಚಂದ್ರ ಮನಃಕಾರಕ. ಶ್ರಾವಣದಲ್ಲಿ ಚಂದ್ರನ ಪ್ರಭಾವ ಹೆಚ್ಚು. ಚಂದ್ರನು ಶ್ರಾವಣ ತಿಂಗಳ ಮೊದಲ ದಿನವಾದ ಪಾಡ್ಯದಿಂದ ಪ್ರತಿ ದಿನವೂ ೧೨ ಡಿಗ್ರಿಯಂತೆ ಸಂಚರಿಸುತ್ತಾನೆ. ಪಂಚಮಿಯ ದಿನದ ಹೊತ್ತಿಗೆ ೬೦ ಡಿಗ್ರಿಗೆ ಬರುತ್ತಾನೆ. ಅಂದರೆ ಚಂದ್ರ ಆ ಹೋತ್ತಿಗೆ ಒಂದು ಕೋನದಲ್ಲಿರುತ್ತಾನೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಭೂವರ್ಗ ಹಾಗೂ ಜಲವರ್ಗದ ಮೇಲೆ ಅವನ ಪ್ರಭಾವ ಹೆಚ್ಚಾಗಿರುತ್ತದೆ ಎನ್ನುವುದು ಪಂಚಾಂಗಕರ್ತರ ಲೆಕ್ಕಾಚಾರ. ಚಂದ್ರ ಪ್ರಭಾವ ಹೆಚ್ಚಿರುವ ಕಾಲದಲ್ಲಿ ಸಾತ್ವಿಕ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದು ಅನುಭವದ ಮಾತು. ಶ್ರಾವಣ ಶುದ್ಧ ಪಂಚಮಿಯ ದಿನ ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ಸಾತ್ವಿಕ ಆಹಾರಗಳನ್ನು ಮಾಡುತ್ತಾರೆ. ಅಂದು ಸಾತ್ವಿಕ ಆಹಾರ ಸೇವಿಸಿ ಪಾರಮಾರ್ಥಿಕ ಚಿಂತನೆ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ದೊರಕುತ್ತದೆ. ಹುತ್ತಕ್ಕೆ ಅಥವಾ ಹುತ್ತದ ಮಣ್ಣಿಗೆ ಹಾಲೆರೆಯುವುದೇಕೆ? ಶ್ರಾವಣ ಮಾಸದ ಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವ ಬಗ್ಗೆ ಎರಡು ಪ್ರಮುಖ ಕಾರಣಗಳನ್ನು ನಮ್ಮ ಹಿರಿಯರು ನೀಡುತ್ತಾರೆ. ಹುತ್ತಕ್ಕೆ ಹಾಲೆರೆಯುವುದು ಕೃತಜ್ಞತೆಯ ಸಂಕೇತವೆಂಬುದು ಮೊದಲ ಕಾರಣವಾದರೆ, ಹುತ್ತಕ್ಕೆ ಹಾಲೆರೆಯುವುದರಿಂದ ಸಂತಾನೋತ್ಪತ್ತಿಗೆ ನೆರವಾಗುತ್ತದಂತೆ. ಕೃತಜ್ಞತೆಯ ಸಂಕೇತ: ಸಾಮಾನ್ಯವಾಗಿ ಜ್ಯೇಷ್ಠ - ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಶ್ರಾವಣದ ಆರಂಭದ ಹೊತ್ತಿಗೆ ಬಿತ್ತಿದ ಬೀಜಗಳು ಪೈರಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ರೈತನ ಶತ್ರುಗಳ ಪಟ್ಟಿಯಲ್ಲಿ ಸೇರಿರುವ ಇಲಿಗಳು ತಿಂದು, ಅವನಿಗೆ ಅಪಾರ ಹಾನಿ ಉಂಟು ಮಾಡುತ್ತವೆ.
ಸಂತಾನೋತ್ಪತ್ತಿಗೆ ಸಹಕಾರಿ : ಶ್ರಾವಣದಲ್ಲಿ ನಾಗರಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವುದು ಹಿಂದಿನಿಂದ ನಡೆದ ಬಂದ ಪದ್ಧತಿ. ಹುತ್ತಕ್ಕೆ ಹಾಲೆರೆಯುವ ಬಗ್ಗೆ ಕೆಲವು ಪಂಡಿತರು ನೀಡುವ ವೈಜ್ಞಾನಿಕ ಇಂತಿದೆ. ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು. ನಮಗೆಲ್ಲಾ ತಿಳಿದಿರುವಂತೆ ಹಾವುಗಳು ಎಂದೂ ಹುತ್ತ ಕಟ್ಟುವುದಿಲ್ಲ. ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ಹಾವು ವಾಸಿಸುತ್ತದೆ. ಗೆದ್ದಲುಗಳು ತಮ್ಮ ಬಾಯಿಯಿಂದ ಒಸರುವ ರಸದ ನೆರವು ಪಡೆದು, ಭೂಮಿಯ ಒಳಗಿನಿಂದ ಮಣ್ಣನ್ನು ಹೊರತೆಗೆದು ಹುತ್ತವನ್ನು ನಿರ್ಮಿಸುತ್ತವೆ. ಬಹು ನವಿರಾದ, ನಯವಾದ ಮಣ್ಣಿನಿಂದ ಗೆದ್ದಲು ಕಟ್ಟಿದ ಹುತ್ತ, ಮಳೆ, ಗಾಳಿಗಳಿಗೂ ಜಗ್ಗುವುದಿಲ್ಲ. ಹುತ್ತದ ಒಳಗೆ ಕೂಡ ಗೆದ್ದಲುಗಳು ನವಿರಾದ ಮಣ್ಣಿನಿಂದ ನೆಲವನ್ನು ಸಮತಟ್ಟು ಮಾಡಿರುತ್ತವೆ. ಇದನ್ನು ಎಲ್ಲಾದರೂ ಹುತ್ತ ಅಗೆದಾಗ ನೀವೂ ಕಾಣಬಹುದು. ಹುತ್ತದೊಳಗೆ ನೆಲ ಮೆತ್ತನೆಯ ಹಾಸಿಗೆಯಂತಿರುತ್ತದೆ. ಅಲ್ಲಿ ಒಂದು ಚಿಕ್ಕ ಕಲ್ಲು ಕೂಡ ಇರುವುದಿಲ್ಲ. ಇಂತಹ ನವಿರಾದ ಸ್ಥಳದಲ್ಲಿ ವಾಸಿಸುವ ಹಾವುಗಳಿಗೆ ಶ್ರಾವಣದ ಚಂದ್ರಮನ ರಶ್ಮಿಗಳು ಬೀಳುತ್ತಿದ್ದಂತೆ ಕಾಮೋದ್ರೇಕಗೊಳ್ಳುತ್ತವೆ. ಸಾಮಾನ್ಯವಾಗಿ ಹಾವುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ಈ ಕಾಲದಲ್ಲೇ ಅಂತೆ. ಹಾವುಗಳು ಲೈಂಗಿಕ ಕ್ರಿಯೆಗೆ ಕೂಡುವ ಸಮಯಕ್ಕೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವಾಗುತ್ತದಂತೆ. ಇದಕ್ಕೆ ರಿಪ್ರೊಡಕ್ಟೀವ್ ಸೈಕಲ್ ಎನ್ನುತ್ತಾರೆ. ಈ ಸಮಯದಲ್ಲಿ ಹಾವುಗಳು ಹುತ್ತದಿಂದ ಹೊರಗೆ ಬರುವಾಗ ಇಲ್ಲವೆ ಹುತ್ತ ಸೇರುವಾಗ ವಿಸರ್ಜಿಸಲ್ಪಟ್ಟ ರಜಸ್ಸನ್ನು ನಯವಾದ ಹುತ್ತದ ಮಣ್ಣು ಹೀರಿಕೊಳ್ಳುತ್ತದೆ.
ನಮ್ಮಲ್ಲಿ ಸಾಮಾನ್ಯವಾಗಿ ನಾಗರ ಎಂಬ ಒಂದು ಚರ್ಮವ್ಯಾಧಿ ಬಂದಾಗ, ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ, ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣವಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ ಎಂಬುದು ಪಂಡಿತರು ತಮ್ಮ ವಾದಕ್ಕೆ ನೀಡುವ ಪುಷ್ಟಿ. ಅಣ್ಣತಮ್ಮಂದಿರ ಹಬ್ಬ : ನಾಗರ ಪಂಚಮಿ ಅಣ್ಣ - ತಂಗಿಯರ ಹಬ್ಬ. ಅಂದು ಸೋದರ - ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಹುತ್ತಕ್ಕೆ ಎರೆದ ಹಾಲನ್ನು ಸಹೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ.ಅಶ್ವತ್ಥಕಟ್ಟೆಗಳ ಕೆಳಗೆ ಪ್ರತಿಷ್ಠಾಪಿಸಿದ ನಾಗರಕಲ್ಲುಗಳಿಗೆ ಪಂಚಮಿಯ ದಿನ ಮುತ್ತೈದೆಯರು ಮಡಿಯಲ್ಲಿ ಹಾಲೆರೆದು ಪೂಜಿಸುತ್ತಾರೆ. ಸುಬ್ರಹ್ಮಣ್ಯೇಶ್ವನ ದೇವಾಲಯಗಳಲ್ಲೂ ನಾಗರ ಪಂಚಮಿಯ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣ ಶುದ್ಧ ಪಂಚಮಿಯಂದು ನಾಗರಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಕೆಲವು ಕಡೆ ದಿಟ ನಾಗರನಿಗೇ ಹಾಲೆರೆವ ರೂಢಿಯೂ ಇದೆ. ಅಣ್ಣತಮ್ಮಂದಿರ ಹಬ್ಬ ಎನ್ನುವುದೇಕೆ. ಹಿಂದೆಲ್ಲ ಒಂದೂರಿನಿಂದ ಮತ್ತೊಂದೂರಿಗೆ ಹೋಗಲು ಈಗಿನಂತೆ ವಾಹನ ಸೌಕರ್ಯ ಇರುತ್ತಿರಲಿಲ್ಲ. ಆಗ ಆಣ್ಣ ತಮ್ಮಂದಿರು, ಅಕ್ಕತಂಗಿಯರು ಒಬ್ಬರನ್ನೊಬ್ಬರು ನೋಡುವುದೇ ಕಷ್ಟವಾಗಿತ್ತು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಅಣ್ಣ -ತಂಗಿ, ಅಕ್ಕ -ತಮ್ಮಂದಿರು ಸಂಸಲಿ ಬಾಂಧವ್ಯ ಹಾಗೇ ಚಿರವಾಗಿರಲಿ ಎಂದು ಹಿರಿಯರು ಈ ಹಬ್ಬವನ್ನು ಸಹೋದರ - ಸಹೋದರಿಯರ ಹಬ್ಬ ಎಂದು ಕರೆದರು. ಬಿತ್ತನೆ ಕಾರ್ಯ ಮುಗಿಸಿ, ವರ್ಷದ ಮೊದಲ ಫಸಲಿನ ನೀರಿಕ್ಷೆಯಲ್ಲಿರುವ ಸೋದರರು, ಸಹೋದರಿಯರನ್ನು ಕರೆಸಿ, ಉಡಿತುಂಬಿ ಕಳುಹಿಸಲಿ ಎಂಬುದೂ ಈ ಹಬ್ಬದ ಆಶಯವಾಗಿದೆ. ಮನುಷ್ಯನ ಚಿಂತನೆಯ ಕೇಂದ್ರವೇ ಮೆದುಳು. ಮೆದುಳು ಕೂಡ ಸರ್ಪದ ಆಕಾರದಲ್ಲೇ ಇದೆ. ಹೀಗಾಗಿ ಇದಕ್ಕೆ ಕುಂಡಲಿನಿ ಎನ್ನುವುದು. ಮನಃಕಾರಕನಾದ ಚಂದ್ರನ ಪ್ರಭಾವವಿರುವ ಮಾಸದಲ್ಲಿ ಕುಂಡಲಿಯನ್ನು ಸಾತ್ವಿಕ ರೀತಿಯಲ್ಲಿ ಉದ್ರೇಕಿಸುವುದೇ ಈ ಸರ್ಪಪೂಜೆಯ ಪರಮಾರ್ಥವಾಗಿದೆ. | |||