|
ಕನ್ನಡಕೆ ಮಿಡಿಯುವ ಮನ.. * ವಾಗ್ಮಿತ್ರ
ಮನೋಜ್ ಕುಮಾರ್ ಮೂಲತಃ ಕಡೂರಿನವರು. ತಂದೆ ಡಾ. ಬಿ. ನಾಗರಾಜ್. ತಾಯಿ ನಾಗರತ್ನಮ್ಮ. ಮನೋಜ್ ಓದಿದ್ದೆಲ್ಲಾ ಬೆಂಗಳೂರಿನಲ್ಲೇ. ಯುವಿಸಿಇಯಲ್ಲಿ ಓದಿ ಬಿಇ ಪದವಿ ಪಡೆದ ಬಳಿಕ ಅಮೆರಿಕೆಗೆ ಹಾರಿದ ಮನೋಜ್ ಟೆಕ್ಸಾಸ್‌ನ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಗಳಿಸಿದರು. ಅಯೋವಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಭಾರತೀಯ ವಿದ್ಯಾರ್ಥಿ ಸಂಘಟನೆ (ಇಂಡಿಯನ್ ಸ್ಟುಡೆಂಟ್ಸ್ ಅಸೋಸಿಯೇಷನ್) ಅಧ್ಯಕ್ಷರಾಗುವ ಮೂಲಕ ಐಎಸ್‌ಎಯ ಅಧ್ಯಕ್ಷರಾದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ವಿವಿಧ ವೇದಿಕೆಗಳಲ್ಲಿ ಕರ್ನಾಟಕದ ಹೆಮ್ಮೆಯ ಭರತನಾಟ್ಯ ಪರಿಚಯಿಸಿದ್ದೇ ಅಲ್ಲದೆ, ಹೊಸದಾಗಿ ಕರ್ನಾಟಕದಿಂದ ಉನ್ನತ ವ್ಯಾಸಂಗಕ್ಕೆ ಅಮೆರಿಕೆಯ ವಿಶ್ವವಿದ್ಯಾಲಯಗಳಿಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳಿಗೆ ಅಮೆರಿಕೆಯ ಸ್ಥಳ, ಸಂಸ್ಕೃತಿಯ ಪರಿಚಯ ಮಾಡಿಸಲೆಂದೇ ಮೂರು ದಿನಗಳ ಓರಿಯಂಟೇಷನ್ ಪ್ರೋಗ್ರಾಮ್ ನಡೆಸುವ ಯೋಜನೆ ಹಮ್ಮಿಕೊಂಡು ಯಶಸ್ವಿಯಾದರು. ಈ ಕಾರ್ಯಕ್ರಮದ ಲಾಭವನ್ನು ಕೇವಲ ಕನ್ನಡ ವಿದ್ಯಾರ್ಥಿಗಳಷ್ಟೇ ಅಲ್ಲ. ಭಾರತ ಇತರ ಭಾಗದಿಂದ ಅಮೆರಿಕಕ್ಕೆ ಆಗಮಿಸಿದ ವಿದ್ಯಾರ್ಥಿಗಳೂ ಪಡೆದರು. ಅಮೆರಿಕೆಯಲ್ಲಿ ಹೇಗೆ ನಡೆದುಕೊಳ್ಳಬೇಕು. ಏನು ಮಾಡಿದರೆ ತಪ್ಪು, ಯಾವುದು ಸರಿ, ಎಲ್ಲಿ ಉಳಿದುಕೊಂಡರೆ, ಹಣ ಉಳಿತಾಯವಾಗತ್ತೆ, ಕರ್ನಾಟಕದ ಆಹಾರ ಪದ್ಧತಿಗೆ ಅನುಗುಣವಾದ ಖಾದ್ಯಗಳು ಎಲ್ಲಿ ದೊರಕುತ್ತವೆ. ಅಕ್ಕಿ, ಬೇಳೆ ಯಾವ ಅಂಗಡಿಯಲ್ಲಿ ಸಿಗುತ್ತದೆ. ಅಲ್ಲಿಗೆ ಹೋಗುವ ಬಗೆ ಹೇಗೆ ಎಂಬಿತ್ಯಾದಿ ಮೂಲಭೂತ ಅಂಶಗಳನ್ನು ಈ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ತಿಳಿಸಿಕೊಡುವ ಮೂಲಕ ಹೊಸದಾಗಿ ಬರುವ ವಿದ್ಯಾರ್ಥಿಗಳ ನೆರವಿಗೆ ನಿಂತ ಮನೋಜ್ ನಾಗರಾಜ್, ಸಂಘಟನೆಯೊಂದು ಹೇಗೆ ಇತರರಿಗೆ ನೆರವಾಗಬಹುದು ಎಂಬುದನ್ನು ಸಾಬೀತು ಪಡಿಸಿದರು.
ವಿಶ್ವವಾಣಿಜ್ಯ ಗೋಪುರದ ಮೇಲೆ ಸೆಪ್ಟೆಂಬರ್ ೧೧ರಂದು ನಡೆದ ದಾಳಿಯ ಸಂದರ್ಭದಲ್ಲಿ ಹಲವು ಕನ್ನಡ ಕುಟುಂಬಗಳು ಮತ್ತು ಅಮೆರಿಕದ ನಡುವೆ ಕೊಂಡಿಯಾಗಿ ಮಾಹಿತಿ ರವಾನಿಸುವ ಕೆಲಸವನ್ನೂ ಮಾಡಿದರು. ಪ್ರಸ್ತುತ ಮಲ್ಲಿಗೆ ಕನ್ನಡ ಕೂಟದ ಸಕ್ರಿಯ ಕಾರ್ಯಕರ್ತರಾಗಿ ಕನ್ನಡದ ಸೇವೆ ಮಾಡುತ್ತಿರುವ ಮನೋಜ್, ಮಲ್ಲಿಗೆ ಕನ್ನಡಕೂಟ ಹೊರತರುತ್ತಿರುವ ಸುಗಂಧ ವಾರ್ತಾ ಪತ್ರದಲ್ಲಿ ಭಾರತೀಯ ಸಾಧಕರ ಬಗ್ಗೆ ಲೇಖನಗಳನ್ನು ಬರೆಯುವ ಮೂಲಕ ಹೊರನಾಡಿನಲ್ಲಿ ಕನ್ನಡಿಗರು ಮತ್ತು ಭಾರತೀಯರು ಮಾಡಿರುವ ಸಾಧನೆಗಳನ್ನು ತಮ್ಮ ಸಂಘದ ಇತರ ಸದಸ್ಯರಿಗೆ ಪರಿಚಯಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಎನ್.ಆರ್. ನಾರಾಯಣ ಮೂರ್ತಿ, ಗುರುರಾಜ ದೇಶಪಾಂಡೆ, ಬಿ.ವಿ. ಜಗದೀಶ್, ಕುಮಾರ್ ಮಳವಳ್ಳಿ ಮೊದಲಾದವರು ಜೀವನ ಸಾಧನೆ ಕುರಿತು ಚಿಕ್ಕ ಚಿಕ್ಕ ಲೇಖನ ಬರೆದಿರುವ ಮನೋಜ್‌ಗೆ ಅಮೆರಿಕೆಯಲ್ಲಿರುವ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಪಟ್ಟಿ ಮಾಡಿ, ಕಿರುಹೊತ್ತಗೆಯೊಂದನ್ನು ತರುವ ಬಯಕೆ. ಇದಕ್ಕಾಗಿ ಮಾಹಿತಿ ಸಂಗ್ರಹದಲ್ಲವರು ತೊಡಗಿದ್ದಾರೆ. ಗುಡ್ ಲಕ್ ಮಿ. ಮನೋಜ್ | |||