ಮುಖಪುಟ /ಸುದ್ದಿ ಸಮಾಚಾರ 

ಹಿರಿಯ ಚಿಂತಕ ಡಾ. ಯು.ಆರ್. ಅನಂತಮೂರ್ತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಬೆಂಗಳೂರು, ಆ.22-  ಹಿರಿಯ ಸಾಹಿತಿ, ನಾಡಿನ ಶ್ರೇಷ್ಠ ಚಿಂತಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌ ಅನಂತಮೂರ್ತಿ ಅವರು ತೀವ್ರ ಅನಾರೋಗ್ಯದಿಂದ ಬೆಂಗಳೂರಿಹಳೆ ಮದ್ರಾಸು ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮೂತ್ರ ಪಿಂಡ ಹಾಗೂ ಮೂತ್ರ ಕೋಶದ ತೊಂದರೆಯಿಂದ ಬಳಲುತ್ತಿರುವ ಅನಂತ ಮೂರ್ತಿ ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಕಳೆದ 10-12 ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ರಾತ್ರಿಯಿಂದ ಅವರ ಆರೋಗ್ಯದಲ್ಲಿ ತೀವ್ರ ಏರು ಪೇರಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸುದರ್ಶನ ಬಲ್ಲಾಳ್ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರ ಎರಡೂ ಕಿಡ್ನಿಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಅವರಿಗೆ ಮನೆಯಲ್ಲೇ ಡಯಾಲಿಸಿಸ್ ಮಾಡಲಾಗುತ್ತಿತ್ತು. ಅವರು ಡಯಾಲಿಸಿಸ್ ನಡುವೆಯೂ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ಚಟುವಟಿಕೆಯಿಂದ ಇದ್ದರು. ಆದರೆ ಕಳೆದ 10-12 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರು ಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು ಎಂದು ಅವರು ವಿವರಿಸಿದರು.

ಕಿಡ್ನಿ ತೊಂದರೆ ಇರುವವರಿಗೆ ಸಾಮಾನ್ಯವಾಗಿ ಹೃದಯ ಸಂಬಂಧಿ ತೊಂದರೆಯೂ ಇರುತ್ತದೆ. ಈ ಸಮಸ್ಯೆ ಅನಂತ ಮೂರ್ತಿ ಅವರಿಗೂ ಇದೆ. ಹೃದಯದ ತೊಂದರೆಗೆ ಅವರು ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾರೆ.  ಜತೆಗೆ ಶ್ವಾಸಕೋಶ ಸಮಸ್ಯೆಯಿಂದಲೂ ಅವರು ಬಳಲುತ್ತಿದ್ದಾರೆ. ನಾವು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ನಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ದೇವರು ದಯೆಯಿಂದ ಅವರು ಶೀಘ್ರ ಗುಣ ಮುಖರಾಗಬೇಕು ಎಂದ ಬಲ್ಲಾಳ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅನಂತಮೂರ್ತಿ ಎಂಬ ಆಲದ ಮರ

 ಮುಖಪುಟ /ಸುದ್ದಿ ಸಮಾಚಾರ