|
ಮುಖಪುಟ
/ಸುದ್ದಿ
ಸಮಾಚಾರ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರಿಗೆ ಪಂಪ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಹೆಸರಾಂತ ವಿದ್ವಾಂಸರೂ ಹಾಗೂ ಸಂಶೋಧಕರೂ ಆಗಿರುವ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರಿಗೆ ಮುಖ್ಯಮಂತ್ರಿಗಳು ಪಂಪ ಪ್ರಶಸ್ತಿ ಪ್ರದಾನ ಮಾಡಿದರು. ಪಂಪ ಪ್ರಶಸ್ತಿ ಸ್ವೀಕರಿಸಿದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು, ತಮ್ಮ ಸಾಹಿತ್ಯಕ ಜೀವನದ ವ್ಯವಸಾಯದಲ್ಲಿ ಧನ್ಯತೆ ತಂದುಕೊಟ್ಟ ದಿನ ಇದಾಗಿದೆ. ತಮ್ಮ ಮುಂದಿನ ಕನಸಾಗಿರುವ ಕನ್ನಡ ಪಾಂಡಿತ್ಯ ರಚನೆಗೆ ಸಿದ್ಧತೆ ನಡೆದಿದ್ದು, ಇದಕ್ಕಾಗಿ ಎಲ್ಲರ ಸಹಕಾರ ಕೋರಿದರು. ಕದಂಬೋತ್ಸವಕ್ಕೆ ಚಾಲನೆ ನೀಡಿ, ಪಂಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪಂಪ ಪ್ರಶಸ್ತಿಯ ಮೊತ್ತ ಈಗಿರುವ ಒಂದು ಲಕ್ಷ ರೂ.ದಿಂದ ಮೂರು ಲಕ್ಷ ರೂ.ಗೆ ಹೆಚ್ಚಿಸಲಾಗುತ್ತದೆ ಎಂದು ಘೋಷಣೆ ಮಾಡಿದರು. ಅಲ್ಲದೇ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊ.ವೆಂಕಟಾಚಲ ಶಾಸ್ತ್ರಿಯವರಿಗೆ ಹೆಚ್ಚಿನ ಮೊತ್ತವಾದ ಉಳಿದ ಎರಡು ಲಕ್ಷ ರೂ.ಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ತಂದುಕೊಡುವಲ್ಲಿ ಬನವಾಸಿಯ ಪಾತ್ರ ಮಹತ್ವದ್ದಾಗಿದ್ದು, ಹಂಪಿ ಉತ್ಸವ ಮತ್ತು ಕದಂಬೋತ್ಸವ ಮಾತ್ರ ರಾಷ್ಟ್ರೀಯ ಉತ್ಸವವಾಗಿ ಆಚರಿಸಲ್ಪಡುತ್ತದೆ ಎಂದ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಕುರಿತಂತೆ ತಜ್ಞರೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು. ೨೦೦೯ನ್ನು ಕನ್ನಡ ಅನುಷ್ಠಾನ ವರ್ಷ ಎಂದು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ, ಸಂಸದ ಅನಂತಕುಮಾರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. | |||