ಮುಖಪುಟ /ಸುದ್ದಿ ಸಮಾಚಾರ   

ಜುಲೈ 14ರಂದು ನಡೆದ ವಿಧಾನಸಭೆ ಕಲಾಪದ ಸಮೀಕ್ಷೆ

*ಟಿ.ಎಂ.ಸತೀಶ್

ಇಂದು ಸಹ ವಿಧಾನಸಭೆಯ ಕಲಾಪ ಆರಂಭವಾದದ್ದು ಗದ್ದಲ,ಧರಣಿಯ ನಡುವೆ. ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮಾಡಿಕೊಂಡ ಮನವಿ ಫಲ ನೀಡಲಿಲ್ಲ. ಸಿ.ಬಿ.ಐ. ತನಿಖೆ ಬೇಕೆ ಬೇಕು ಎಂಬ ಘೋಷಣೆ ಸದನದಲ್ಲಿ ಮಾರ್ದನಿಸಿತು.

ಈ ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಲು ಎದ್ದು ನಿಂತಾಗ, ಪ್ರತಿಪಕ್ಷ ಸದಸ್ಯರ ಧರಣಿ ಮುಂದುವರಿದಿತ್ತಾದರೂ ಸದನ ನಿಶ್ಶಬ್ದವಾಯ್ತು.

ಮುಖ್ಯಮಂತ್ರಿ ಲೋಕಾಯುಕ್ತರು ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ. ಅವರಿಗೆ ಹೆಚ್ಚಿನ ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಸದನದಲ್ಲಿ ಕಳೆದ ವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ನೀವೂ ಇದ್ದೀರಿ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ. ಇನ್ನು ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತರ ಕೈ ಬಲಪಡಿಸೋಣ. ಕಾನೂನು ಬಾಹಿರವಾಗಿ ಅದಿರು ರಫ್ತು ನಡೆಯುತ್ತಿದ್ದರೆ ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ರೂ ಕ್ರಮ ಕೊಳ್ಳೋಣ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ, ಕರತಾಡನ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ನೀವೇ 60 ದಿನ ಅಧಿವೇಶನ ನಡೆಸಿ ಎಂದು ಒತ್ತಾಯಿಸಿದ್ರಿ. ನಿಮ್ಮ ಬೇಡಿಕೆ ಈಡೇರಿಸಿದ್ದೇವೆ. ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಬೇಕು. ಅನೇಕ ವಿಧೇಯಕಗಳು ಪಾಸ್ ಆಗಬೇಕು. ನಿಮ್ಮ ಅನುಪಸ್ಥಿತಿಯಲ್ಲಿ ವಿಧೇಯಕ ಪಾಸ್ ಮಾಡಿಕೊಳ್ಳೋದು ನಮಗೆ ಇಷ್ಟ ಇಲ್ಲ. ಅದಕ್ಕೆ ಅವಕಾಶ ಕೊಡಬೇಡಿ ಎಂದಾಗಲೂ ಆಡಳಿತ ಪಕ್ಷದ ಸದಸ್ಯರಿಂದ ಕರತಾಡನ.

ಹಿಂದೆ ಹಲವು ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದೀರಿ. ಆದರೆ, ನೀವು ಸಿಬಿಐ ತನಿಖೆ ಮಾಡಿಸಿಲ್ಲ. ಮುಖ್ಯವಾಗಿ ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ, ಮತ್ತಷ್ಟು ವಿಳಂಬ ಆಗತ್ತೆ. ಈಗಾಗಲೇ ಲೋಕಾಯುಕ್ತರು ತನಿಖೆ ನಡೆಸಿದ್ದಾರೆ. ಅವರಿಗೆ ಹೆಚ್ಚಿನ ಅಧಿಕಾರ ಕೊಟ್ಟರೆ ಅವರು ವರದಿ ಕೊಡ್ತಾರೆ. ಅದರ ಮೇಲೆ ಕ್ರಮ ಕೈಗೊಳ್ಳೋಣ. ಲೋಕಾಯುಕ್ತರ ಬಗ್ಗೆ ನಿಮಗೂ ವಿಶ್ವಾಸ ಇದೆ. ಸಿಬಿಐ ಬೇಡಿಕೆ ಕೈಬಿಟ್ಟು ಸಹಕಾರ ನೀಡಿ. ನೀವು ಬೇಕಾದ್ರೆ ಬಳ್ಳಾರಿ ಪಾದಯಾತ್ರೆಯನ್ನು ಅಧಿವೇಶ ನಡೆದ ಮೇಲೆ ಇಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮಾಡಿದ್ರು.

ಮುಖ್ಯಮಂತ್ರಿಗಳ ನಿರರ್ಗಳ, ಓತಪ್ರೋತವಾದ ಮಾತುಗಳು ಮುಗಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಲು ಎದ್ದು ನಿಂತರು. ಆಗ ಮತ್ತೆ ಗದ್ದಲದ ವಾತಾವರಣ. ನೀವು ಮಾತನಾಡುವಾಗ ನಾವು ಸುಮ್ಮನಿರಲಿಲ್ಲವೇ. ನಮ್ಮ ಮಾತನ್ನೂ ಕೇಳಿ ಎಂದರು ಸಿದ್ದರಾಮಯ್ಯ.

ಮುಖ್ಯಮಂತ್ರಿಗಳು ಇವತ್ತು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. 101 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿದ್ದೇವೆ. ಸದನದ ಕಲಾಪ ನಡೆಯದಂತೆ ಮಾಡುವ ಯಾವುದೇ ಉದ್ದೇಶ ನಮಗೂ ಇಲ್ಲ. ಹೆಚ್ಚು ದಿನ ಸದನ ನಡೆಯಬೇಕು. ಹೆಚ್ಚು ಹೆಚ್ಚು ವಿಷಯಗಳ ಬಗ್ಗೆ ಚರ್ಚೆ ಆಗಬೇಕು. ಜನರ ಕಷ್ಟಕ್ಕೆ ಪರಿಹಾರ ದೊರಕಬೇಕು ಎನ್ನುವುದು ನಮ್ಮ ಆಶಯ. ಕಳೆದ ವರ್ಷ ನೀವು ಕೇವಲ 30 ದಿನ ಅಧಿವೇಶನ ನಡೆಸಿದ್ರಿ.

ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ 20 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ನಷ್ಟವಾಗಿದೆ. ಸರ್ಕಾರದಲ್ಲಿರೋರೆ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಲೋಕಾಯುಕ್ತ ವರದಿ ಹೇಳಿದೆ. ಇದು ಕೇವಲ ಒಂದು ಹಗರಣ ಮಾತ್ರ. ಇದಲ್ಲದೆ ಹಲವು ಹಗರಣ ಇದೆ ಈ ಎಲ್ಲದರ ಬಗ್ಗೆಯೂ ಚರ್ಚೆಗೆ ನಾವು ಸಿದ್ಧ ಎಂದಾಗ, ವಿರೋಧ ಪಕ್ಷದ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ತಾವೇನೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸುವ ಯತ್ನ ಮಾಡಿದ್ರು.

ರಾಜ್ಯದಲ್ಲಿ ಕರೆಂಟ್ ಸಮಸ್ಯೆ ಇದೆ. ಕುಡಿಯುವ ನೀರಿಲ್ಲದೆ ಜನ ಒದ್ದಾಡ್ತಾ ಇದ್ದಾರೆ. ಮುಂಗಾರು ಆರಂಭವಾದ್ರೂ ಮಳೆ ಆಗ್ತಾ ಇಲ್ಲ. ಮಲೆನಾಡಿನಲ್ಲೂ ಮಳೆ ಕಡಿಮೆ ಆಗಿದೆ. ರೈತರ ಸಮಸ್ಯೆ ಚರ್ಚೆಗೆ ಪರಿಹಾರ ದೊರಕಿಸಲು ನಮಗೂ ಆಸಕ್ತಿ ಇದೆ ಎಂದರು.

ಕಳೆದ ಅಧಿವೇಶನದಲ್ಲಿ ನಾನು ವಿಧಾನಸಭೆಯಲ್ಲಿ 4 ಗಂಟೆಗೂ ಹೆಚ್ಚು ಕಾಲ ನೆರೆ ಸಂತ್ರಸ್ತರ ಸಂಕಷ್ಟದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಮುಖ್ಯಮಂತ್ರಿಗಳು ಅದಕ್ಕೆ ಈ ಸದನದಲ್ಲಿ ಉತ್ರಾನೇ ಕೊಡಲಿಲ್ಲ ಎಂದೂ ಆಕ್ಷೇಪ ವ್ಯಕ್ತಪಡಿಸಿದರು.

ಪ್ರವಾಹದಿಂದ ಉತ್ತರ ಕರ್ನಾಟಕದ ಜನ ಸಂಕಷ್ಟಕ್ಕೆ ಸಿಲುಕಿದಾಗ ಪ್ರಧಾನ ಮಂತ್ರಿಗಳೂ, ಸೋನಿಯಾಗಾಂಧೀ ಅವರೂ ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಿದ್ರು. ಕೇಂದ್ರ ಸರ್ಕಾರ 1ಸಾವಿರದ 698 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಜನ ನೆರೆ ಸಂತ್ರಸ್ತರಿಗಾಗಿ 416 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಆದರೆ ಸರ್ಕಾರ ಈವರೆಗೆ 1ಸಾವಿರದ 632 ಕೋಟಿ ರೂಪಾಯಿ ಮಾತ್ರ ಖರ್ಚು ಮಾಡಿದೆ. ಮನಸ್ಸಿದಿದ್ದರೆ 10 ತಿಂಗಳಲ್ಲಿ ಕೇವಲ 700 800 ಕೋಟಿ ರೂಪಾಯಿ ವೆಚ್ಚ ಮಾಡಿದ್ರೂ ಸಂತ್ರಸ್ತರಿಗೆ ಮನೆ ಕಟ್ಟಿಸಬಹುದಿತ್ತು ಎಂದರು.  

ಈ ಮಾತಿನಿಂದ ತುಸು ಕೋಪಗೊಂಡ ಮುಖ್ಯಮಂತ್ರಿ ಎದ್ದು ನಿಂತು ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ಹಣ ನೀವು ದುರುಪಯೋಗ ಮಾಡಿಕೊಂಡು ನಮಗೆ ಹೇಳ್ತೀರಾ ಎಂದಾಗ.. ಸಿದ್ದರಾಮಯ್ಯ ಮತ್ತೆ ಸಿಟ್ಟಿಗೆದ್ದರು.

ನೋಡಿ ಮತ್ತೆ ಸಿ.ಎಂ. ಅದೇ ವರಸೆ ಶುರು ಮಾಡಿದ್ದಾರೆ. ನೀವು ಮಾತಾಡೋವಾಗ ನಾವು ಸುಮ್ಮನಿರಲಿಲ್ಲವೇ ನೋಡಿ ಸಭಾಧ್ಯಕ್ಷರೆ ಎಂದು ಮುಖ್ಯಮಂತ್ರಿ ಕಡೆಗೆ ತೋರು ಬೆರಳು ತೋರಿದರು.

ಈ ಹಂತದಲ್ಲಿ ಮತ್ತೆ ಪ್ರಶಾಂತವಾಗಿದ್ದ ವಿಧಾನಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣ ಆಯ್ತು.

ಸರ್ಕಾರಕ್ಕೆ ಸದನ ನಡೆಸೋ ಇಚ್ಛೆ ಇಲ್ಲ. ಅದಕ್ಕೆ ಹೀಗೆ ಮಾಡ್ತಾ ಇದ್ದೀರಿ ಎಂದು ಸಿದ್ದರಾಮಯ್ಯ ಗುಡುಗಿದರು.

ಪ್ರತಿಪಕ್ಷ ಸದಸ್ಯರು ಧಿಕ್ಕಾರ ಕೂಗುತ್ತಿದ್ದರೆ, ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದರೆ, ಅತ್ತ ಮೂಲೆಯಲ್ಲಿ ನಿಂತು ನೆರೆ ಹಣ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ವಿರುದ್ಧ ತನಿಖೆ ಆಗಲಿ ಎಂದು ಬಿಜೆಪಿ ಸದಸ್ಯೆ ಶೋಭಾ ಕರಂದ್ಲಾಜೆ ಮಾಡುತ್ತಿದ್ದರೆ, ಆಡಳಿತ ಪಕ್ಷದ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಬೆಂಬಲಕ್ಕೆ ನಿಂತರು. ಮುಖ್ಯಮಂತ್ರಿಗಳೇ ಪ್ರಚೋದನೆ ನೀಡಿ, ಆಡಳಿತ ಪಕ್ಷದ ಸದಸ್ಯರಿಂದ ಗದ್ದಲ ಮಾಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಈ ಹಂತದಲ್ಲಿ ಆರೋಪಿಸಿದರು.

ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರನ್ನುಸಮಾಧಾನ ಪಡಿಸಲು ಯತ್ನಿಸಿದ ಸಭಾಧ್ಯಕ್ಷರ ಮಾತೂ ಸದನದಲ್ಲಿ ಕೇಳದಂತಾಗಿತ್ತು. ಕೊನೆಗೆ ನೊಂದ ಸಭಾಧ್ಯಕ್ಷರು ಇದು ಕಡತಕ್ಕೆ ಸೇರಲ್ಲ ಎಂದು ರೂಲಿಂಗ್ ನೀಡಿ, ಕರ್ನಾಟಕ ಜನತೆಯ ಕ್ಷಮೆ ಯಾಚಿಸಿ, ಎರಡೂ ಕಡೆಯವರು ಸದನ ಕಲಾಪ ನಡೆಸಲು ಅವಕಾಶ ಕೊಡದ ಕಾರಣ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

ರಾಜ್ಯಲೂಟಿ ಮಾಡ್ತಾ ಇದ್ದಾರೆ. ಅಸೆಂಬ್ಲಿ ನಡೆಸ್ತಾರಂತೆ ಅಸೆಂಬ್ಲಿ  ಎಂದು ಆರೋಪಿಸುತ್ತಾ ಸಿದ್ದರಾಮಯ್ಯ ಸದನದಿಂದ ಹೊರನಡೆದರು. ಕಾಂಗ್ರೆಸ್ ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನು ಅನುಸರಿಸಿದರೆ.

ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೂಗುತ್ತಾ ಹೊರ ಹೊರಟ ಎಚ್.ಡಿ. ರೇವಣ್ಣ ಅವರನ್ನು ಜೆಡಿಎಸ್ ಶಾಸಕರು ಅನುಸರಿಸಿದರು. ಸದಸ್ಯರು ತಮ್ಮ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದರು.

 ಮುಖಪುಟ /ಸುದ್ದಿ ಸಮಾಚಾರ