|
ವಿಧಾನಮಂಡಲ ಅನಿರ್ದಿಷ್ಟ ಮುಂದೂಡಿಕೆ (ವಿಶೇಷ ಪ್ರತಿನಿಧಿಯಿಂದ)
ನಂತರ ಸಭಾಧ್ಯಕ್ಷರು, ಸದನ ಕಲಾಪವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದೂಡಿದರು. ಇದರೊಂದಿಗೆ ರಾಜ್ಯ ವಿಧಾನಮಂಡಲದ ಇತಿಹಾಸದಲ್ಲೇ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಧರಣಿ ನಡೆದು ಉಭಯ ಸದನಗಳ ಕಲಾಪವನ್ನು ಏಕಕಾಲಕ್ಕೆ ಅನಿರ್ದಿಷ್ಟಾವಧಿಯವರೆಗೆ ಮುಂದೂಡಿದ ಇತಿಹಾಸ ಸೃಷ್ಟಿಯಾಯಿತು. ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿಯಮ ೬೯ ರಡಿಯಲ್ಲಿ ನಡೆದ ಚರ್ಚೆ, ಚರ್ಚೆ ವೇಳೆ ನಡೆದ ಅಹಿತಕರ ಘಟನೆ ಮತ್ತು ಚರ್ಚೆಗೆ ನೀಡಿದ ಉತ್ತರಗಳ ನಡುವೆ ಪ್ರತಿಪಕ್ಷಗಳು ಕಳೆದ ಸೋಮವಾರ ಆರಂಭಿಸಿದ ಅಹೋರಾತ್ರಿ ಧರಣಿ ಸತತ ೫ ದಿನಗಳ ಕಾಲ ನಡೆದು ಯಾವುದೇ ಫಲ ಕಾಣದೆ ತಿಂಗಳಾಂತ್ಯದವರೆಗೆ ನಡೆಯಬೇಕಿದ್ದ ಸದನ ಕಲಾಪ ಏಕಾಏಕಿಯಾಗಿ ಮುಂದಕ್ಕೆ ಹೋಗುವಂತೆ ಮಾಡಿತು. ಇಂದು ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಮತ್ತು ಸಭಾಪತಿಗಳ ಮುಂದಿನ ಬಾವಿಗೆ ತೆರಳಿ ಧರಣಿ ಆರಂಭಿಸಿದರು, ಗಣಿ ಅಕ್ರಮದ ಬಗ್ಗೆ ಸಿ.ಬಿ.ಐ. ತನಿಖೆ ಆಗಲೇಬೇಕು ಎಂದು ಪಟ್ಟು ಹಿಡಿದರು. ಸಭಾಧಕ್ಷ ಕೆ.ಜಿ.ಬೋಪಯ, ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಮಾಡಿಕೊಂಡ ಮನವಿ ಫಲ ನೀಡಲಿಲ್ಲ. ಆಡಳಿತಪಕ್ಷ ಪ್ರತಿಪಕ್ಷಗಳ ಭಾರೀ ಗದ್ದಲ, ಆರೋಪ, ಪ್ರತ್ಯಾರೋಪಗಳ ನಡುವೆ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾಯ್ತು. ಇದರ ನಡುವೆಯೇ ಲೋಕಾಯುಕ್ತ ತಿದ್ದುಪಡಿ ವಿಧೇಯಕ, ಭೂಕಂದಾಯ ತಿದ್ದುಪಡಿ ವಿಧೇಯಕ, ಪೌರ ನಿಗಮಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಹೆದ್ದಾರಿ ತಿದ್ದುಪಡಿ ವಿಧೇಯಕ, ಕರ್ನಾಟಕ ಮೋಟಾರು ವಾಹನ ೨ನೇ ತಿದ್ದುಪಡಿ ವಿಧೇಯಕ, ನ್ಯಾಯವಾದಿಗಳ ಕಲ್ಯಾಣ ನಿಧಿ ವಿಧೇಯಕ, ಕರ್ನಾಟಕ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ವಿ.ವಿ.ಗಳ ತಿದ್ದುಪಡಿ ವಿಧೇಯಕ ಹಾಗು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಸೂದೆ ೨೦೧೦ಕ್ಕೆ ಯಾವುದೇ ಚರ್ಚೆ ಇಲ್ಲದೇ ವಿಧಾನಮಂಡಳದ ಉಭಯ ಸದನಗಳೂ ಅಂಗೀಕಾರ ನೀಡಿದವು. ನಿನ್ನೆ ಹಾಗೂ ಇಂದು ಸುಮಾರು ಹತ್ತೊಂಭತ್ತು ವಿಧೇಯಕಗಳನ್ನು ವಿಧಾನ ಮಂಡಳ ಅನುಮೋದಿಸಿತು. ಇಂದು ೧೦ ವಿಧೇಯಕಗಳಿಗೆ ಅನುಮೋದನೆ ಪಡೆದ ತರುವಾಯ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹಾಗೂ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸದನಗಳ ಕಲಾಪವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದೂಡಿದರು. ವಿಧಾನಸಭೆ: ವಿಧಾನಸಭೆಯಲ್ಲಿಂದು ಪ್ರತಿಪಕ್ಷಗಳ ಧರಣಿಯ ನಡುವೆಯೇ ಸದನ ಕಲಾಪ ಆರಂಭವಾದಾಗ ಧರಣಿ ನಿರತರಿಗೆ ಸುಗಮ ಕಲಾಪಕ್ಕೆ ಅನುವು ನೀಡುವಂತೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾಡಿಕೊಂಡ ಮನವಿ ಫಲ ನೀಡಲಿಲ್ಲ. ಹೀಗಾಗಿ ಏಕಾಏಕಿಯಾಗಿ ಕಲಾಪಕ್ಕೆ ಚಾಲನೆ ನೀಡಿ ವಿವಿಧ ಇಲಾಖೆಗಳ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿ, ಅಂಗೀಕಾರ ಪಡೆಯುವ ಪ್ರಕ್ರಿಯೆಗೆ ಅವರು ಮುಂದಾದರು. ಪ್ರತಿಪಕ್ಷಗಳ ಸದಸ್ಯರು ಅದನ್ನು ತೀವ್ರವಾಗಿ ವಿರೋಧಿಸಿ, ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ ಎಂದು ದೂರಿದರು. ಟಿ.ಬಿ.ಜಯಚಂದ್ರ ಮಾತನಾಡಿ, ಇದು ಒಳ್ಳೆಯ ಸಂಪ್ರದಾಯವಲ್ಲ. ಸರ್ಕಾರ ಹಠಮಾರಿತನ ಮಾಡಿದರೂ ನೀವು ಸಭಾಧ್ಯಕ್ಷರು ನಮ್ಮ ರಕ್ಷಣೆಗೆ ಬರಬೇಕು. ನೀವು ಸಹ ನಮ್ಮ ಕಡೆ ನೋಡದಿದ್ದರೆ ಈ ನಿಯಮಾವಳಿಗಳೆಲ್ಲ ಏಕೆ?ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಆದರೆ ಈ ಅಭಿಪ್ರಾಯಕ್ಕೆ ಮನ್ನಣೆ ನೀಡದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ನೀವು ನಿಮ್ಮ ನಿಮ್ಮ ಸ್ಥಾನಗಳಿಗೆ ಮರಳಿದರೆ ಮಾತನಾಡಲು ಅವಕಾಶ ಕೊಡುತ್ತೇನೆ. ಇಲ್ಲವಾದರೆ ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದರಾದರೂ ಪ್ರತಿಪಕ್ಷಗಳ ಸದಸ್ಯರು ಒಂದೇ ಸಮನೆ ಘೋಷಣೆ ಕೂಗುತ್ತಾ ಹೋದರು. ಪ್ರತಿಪಕ್ಷಗಳ ಸದಸ್ಯರು ಬಚಾವೋ ಬಚಾವೋ ಕರ್ನಾಟಕ್ ಕೋ ಬಚಾವೋ, ಧಿಕ್ಕಾರ ಧಿಕ್ಕಾರ, ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಸಾವಿರಾರು ಕೋಟಿ ಲೂಟಿ ಮಾಡಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಗಲಿ ಗಲಿ ಮೇ ಶೋರ್ ಹೈ, ಬಿಜೆಪಿ ಚೋರ್ ಹೈ, ಎಂದು ಒಂದೇ ಸಮನೆ ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿದರು. ಸದನದಲ್ಲಿ ಯಾರ ಮಾತು ಯಾರಿಗೂ ಕೇಳದ ಪರಿಸ್ಥಿತಿ ನಿರ್ಮಾಣವಾಯಿತು. ಟಿ.ಬಿ.ಜಯಚಂದ್ರ, ಏನಿದು ಅಪಚಾರ? ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ?ನೀತಿ ನಿಯಮ ಇದೆಯೇ? ವಿಧಾನಸಭೆಯ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ. ನಾವು ಪ್ರತಿಭಟನೆ ಮಾಡುತ್ತಿದ್ದರೆ ನೀವು ತಿದ್ದುಪಡಿ ವಿಧೇಯಕಗಳಿಗೆ ಅಂಗೀಕಾರ ಪಡೆಯುವ ಕೆಲಸ ಮಾಡುತ್ತಿದ್ದೀರಿ. ಇದು ಅಪಚಾರ ಎಂದರು. ಆದರೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ನೀವು ಹೇಳಿದಂತೆ ನಡೆಯಲು ನಾನು ತಯಾರಿಲ್ಲ. ನಿಮಗೆ ಇದನ್ನು ಹೇಳುವ ಹಕ್ಕಿಲ್ಲ. ನಿಮ್ಮ ನಿಮ್ಮ ಜಾಗಕ್ಕೆ ಹೋಗಿ ಮಾತನಾಡಿದ್ದರೆ ಅದು ಸಭಾಗೌರವ. ಆದರೆ ನೀವು ಧರಣಿ ಕುಳಿತು ಹಠ ಹಿಡಿಯುತ್ತಿದ್ದೀರಿ ಎಂದು ಹೇಳಿದರು. ಪ್ರತಿಪಕ್ಷಗಳ ಧರಣಿ, ಧಿಕ್ಕಾರ ಘೋಷಣೆ, ಪ್ರತಿಭಟನೆ ಲೆಕ್ಕಿಸದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ವಿಧೇಯಕಗಳನ್ನು ಮತಕ್ಕೆ ಹಾಕಿದರು. ಎಲ್ಲ ವಿಧೇಯಕಗಳು ಧ್ವನಿಮತದ ಅಂಗೀಕಾರ ಪಡೆದವು. ಇದೆಲ್ಲದರ ನಡುವೆ ಸದನದಲ್ಲಿ ಕಲಾಪ ಪಟ್ಟಿ, ವಿಧೇಯಕದ ಪ್ರತಿ ಹರಿದು ಬಿಸಾಡಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು. ಗದ್ದಲ ಅತಿಯಾದಾಗ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸದನ ಕಲಾಪವನ್ನು ಮಧ್ಯಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು, ನಂತರ ಮಧ್ಯಾಹ್ನ ಸಮಾವೇಶಗೊಂಡಾಗಲೂ ಪರಿಸ್ಥಿತಿ ತಿಳಿಯಾಗದ ಕಾರಣ, ಗದ್ದಲ, ಕೋಲಾಹಲದ ನಡುವೆಯೇ ಸಭಾಪತಿಗಳಿಂದ ಬಂದ ಸಂದೇಶ ಓದಿ, ಸದನ ಸುಗಮವಾಗಿ ಸಾಗಲು ಎರಡೂ ಪಕ್ಷದವರು ಅವಕಾಶ ನೀಡದ ಕಾರಣ, ಕರ್ನಾಟಕ ಜನತೆಯ ಕ್ಷಮೆಕೋರಿ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿರುವುದಾಗಿ ಪ್ರಕಟಿಸಿ ಹೊರನಡೆದರು. ವಿಧಾನ ಪರಿಷತ್ತು: ವಿಧಾನ ಪರಿಷತ್ತಿನಲ್ಲಿಯೂ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿರಲಿಲ್ಲ. ಮಧ್ಯಾಹ್ನ ೧೨-೧೫ಕ್ಕೆ ಆರಂಭವಾಗಬೇಕಿದ್ದ ಕಲಾಪ ೧ ಗಂಟೆಗೆ ಆರಂಭವಾದಾಗ, ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾತಂತ್ರ್ಯ ಯೋಧರ ಸ್ಮಾರಕವನ್ನು ಅದೇ ಜಾಗದಲ್ಲಿ ಮಾಡುವುದಾಗಿ ಭರವಸೆ ನೀಡಿದರು. ಕಳೆದ ೧೬ರಂದು ದೇಶಪಾಂಡೆ ಆವರ ಪುತ್ರ ಹಾಗು ಜಾಲಪ್ಪ ಅವರ ಆಳಿಯ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದೆ, ಇದಕ್ಕೆ ವಿವರಣೆ ನೀಡಿ ವಿಷಾದ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕಿ ಮೋಟಮ್ಮ ಇದರ ಮೇಲೆ ಚರ್ಚೆಗೆ ಆಗ್ರಹಿಸಿದಾಗ ಈ ವಿಷಯ ಮುಗಿದ ಅಧ್ಯಾಯ ಎಂದು ಸಭಾಪತಿ ತಿಳಿಸಿ ವಿಷಯಕ್ಕೆ ಮಂಗಳ ಹಾಡಿದರು. ನಂತರ ಧನ ವಿನಿಯೋಗ ವಿಧೇಯಕ ಸೇರಿದಂತೆ ಹಲವು ಮಸೂದೆಗೆ ಮೇಲ್ಮನೆ ಧ್ವನಿಮತದ ಆಂಗೀಕಾರ ನೀಡಿತು. ಈ ಹಂತದಲ್ಲಿ ಕೋಲಾಹಲ ಉಂಟಾದ ಕಾರಣ ಕಲಾಪವನ್ನು ಮಧ್ಯಾಹ್ನ ೩ಕ್ಕೆ ಮುಂದೂಡಲಾಯಿತು. ನಂತರ ಮಧ್ಯಾಹ್ನ ಸಮಾವೇಶಗೊಂಡಾಗಲೂ ಪರಿಸ್ಥಿತಿ ತಿಳಿಯಾಗದ ಕಾರಣ, ಗದ್ದಲ, ಕೋಲಾಹಲದ ನಡುವೆಯೇ ಸಭಾಧ್ಯಕ್ಷರಿಂದ ಬಂದ ಸಂದೇಶ ಓದಿ, ಸದನ ಸುಗಮವಾಗಿ ಸಾಗಲು ಎರಡೂ ಪಕ್ಷದವರು ಅವಕಾಶ ನೀಡದ ಕಾರಣ, ಕರ್ನಾಟಕ ಜನತೆಯ ಕ್ಷಮೆಕೋರಿ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿರುವುದಾಗಿ ಪ್ರಕಟಿಸಿ ಹೊರನಡೆದರು. | |||