ಮುಖಪುಟ /ಸುದ್ದಿ ಸಮಾಚಾರ   
 

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಚರ್ಚೆ ಅತ್ಯಾವಶ್ಯಕ

ಕು.ವನಿತಾ ಸ್ಮಾರಕ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ, Kannada debate compitation, National college bangalore, Dr. Mahesh joshi, ಬೆಂಗಳೂರು, ನ.7: ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಚರ್ಚೆ ಮಹತ್ವದ ಪಾತ್ರವಹಿಸುತ್ತದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಶಿ ಅಭಿಪ್ರಾಯಪಟ್ಟರು.

ನ್ಯಾಷನಲ್ ಕಾಲೇಜು ಬಸವನಗುಡಿ ಹಾಗೂ ಕರ್ನಾಟಕ ಚರ್ಚಾವೇದಿಕೆ ಸಂಯುಕ್ತವಾಗಿ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ಕುಮಾರಿ ವನಿತಾ ಸ್ಮಾರಕ ರಾಜ್ಯಮಟ್ಟದ ೮ನೇ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯಾವುದೇ ಮಹತ್ವದ ಯೋಜನೆ, ನಿರ್ಧಾರ ನಿರ್ಣಯವಾಗುವುದೇ ಚರ್ಚೆಯಿಂದ, ಮಹತ್ವಪೂರ್ಣ ಹಾಗೂ ಆರೋಗ್ಯಪೂರ್ಣ ಮಾತುಕತೆಯಿಲ್ಲದಿದ್ದರೆ ಸಮಸ್ಯೆಗಳೆಲ್ಲವೂ ಸಮಸ್ಯೆಗಳಾಗಿಯೇ ಉಳಿಯುತ್ತವೆ ಎಂದು ಹೇಳಿದರು.

ಹಿರಿಯ ವಕೀಲರಾದ ಮಲ್ಲೇಶಯ್ಯ ಅವರು, ವೈದ್ಯರ ನಿರ್ಲಕ್ಷ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ತಮ್ಮ ಪುತ್ರಿಯ ಸಾವಿನ ನೋವನ್ನು ಮರೆತು, ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಕಳೆದ ೮ ವರ್ಷಗಳಿಂದಲೂ ನಡೆಸುತ್ತಾ ಬಂದಿರುವ ಈ ಸ್ಪರ್ಧೆ ಯುವ ಜನರಲ್ಲಿ ಸುಪ್ತವಾಗಿರುವ ವಾಕ್ ಪ್ರತಿಭೆಯ ಪ್ರಕಾಶಕ್ಕೆ ಉತ್ತಮ ವೇದಿಕೆ ಕಲ್ಪಿಸಿದೆ ಎಂದರು.

ಬಹುತೇಕ ಮಂದಿ ಬದುಕಿದ್ದೂ ಸತ್ತಂತಿರುತ್ತಾರೆ. ಆದರೆ, ಕುಮಾರಿ ವನಿತಾ ಇಂದು ನಮ್ಮೊಂದಿಗಿಲ್ಲದಿದ್ದರೂ ಎಲ್ಲ ಚರ್ಚಾಪಟುಗಳ ಹೃದಯಾಂತರಾಳದಲ್ಲಿ ಗೌರವಾದರಗಳೊಂದಿಗೆ ಜೀವಂತವಾಗಿದ್ದಾರೆ ಎಂದರು.

ನಗೆಕೂಟದ ಸದಸ್ಯ ವೈ.ವಿ. ಗುಂಡೂರಾವ್, ಚರ್ಚೆ ಎಂಬುದು ಕೇವಲ ವಾದ -ವಿವಾದವಷ್ಟೇ ಅಲ್ಲ, ಬಹುಮಾನಕ್ಕಾಗಿ ನಡೆಯುವ ಸ್ಪರ್ಧೆ ಮಾತ್ರವೇ ಅಲ್ಲ ಅದು ಸತ್ಯಾನ್ವೇಷಣೆ ಎಂದು ಹೇಳಿದರು.

೫೫ ಕಾಲೇಜಿನ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಪದವಿ ಪೂರ್ವ ವಿಭಾಗದ ಪಾರಿತೋಷಕವನ್ನು ರೂರಲ್ ಕಾಲೇಜು ಕನಕಪುರದ ವಿದ್ಯಾರ್ಥಿಗಳು ಪಡೆದರೆ, ಪದವಿ ವಿಭಾಗದ ಕು.ವನಿತಾ ಸ್ಮಾರಕ ಪರ್ಯಾಯ ಪಾರಿತೋಷಕ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪಾಲಾಯಿತು.

ಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಪ್ರಭಾಕರ ರೆಡ್ಡಿ ಹಾಗೂ ನ್ಯಾಷನಲ್ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಎ.ಎಚ್. ರಾಮರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕ ಚರ್ಚಾವೇದಿಕೆಯ ಅಧ್ಯಕ್ಷ ಮಲ್ಲೇಶಯ್ಯ ಪರಿಚಯ ಭಾಷಣ ಮಾಡಿದರು. ಸಮಾರಂಭದಲ್ಲಿ ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಲೀಲಾವತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ಅಂಬಿಕಾ ಮೊದಲಾದವರು ಪಾಲ್ಗೊಂಡಿದ್ದರು. 

ಮುಖಪುಟ /ಸುದ್ದಿ ಸಮಾಚಾರ