ಮುಖಪುಟ /ಸುದ್ದಿ ಸಮಾಚಾರ

ಯಾರು ಹಿತವರು ಈ ಐವರೊಳಗೆ
ನ.೯ರ ಕ.ಸಾ.ಪ. ಕಾರ್ಯಕಾರಿಯಲ್ಲಿ ಅಂತಿಮ ತೀರ್ಮಾನ

kannadammaಬೆಂಗಳೂರು, ಅ. ೩೦: ಗಂಗಾವತಿಯಲ್ಲಿ ನವೆಂಬರ್ ೧೮ರಿಂದ  ನಡೆಯಬೇಕಿದ್ದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ೯ ಕ್ಕೆ ಮುಂದೂಡಿಕೆ ಆಗಿದೆ. ಈಗ  ಸಮ್ಮೇಳನಾಧ್ಯಕ್ಷತೆ ವಹಿಸುವವರು ಯಾರು ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.   

ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲು ಹಲವು ಹಿರಿಯ ಸಾಹಿತಿಗಳ, ಲೇಖಕರ, ನಾಟಕಕಾರರ ಹೆಸರು ಕೇಳಿಬಂದಿದ್ದು, ಕೆಲವು ಸಾಹಿತಿಗಳ ಪರವಾಗಿ ಲಾಭಿಯೂ ಆರಂಭವಾಗಿದೆ. 

ಪ್ರಸ್ತುತ ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ, ಹಿರಿಯ ಸಾಹಿತಿಗಳಾದ ಪಂಚಾಕ್ಷರಿ ಹಿರೇವಾಡ, ಸಿ.ಪಿ. ಕೃಷ್ಣಕುಮಾರ್, ಹಂ.ಪ.ನಾಗರಾಜಯ್ಯ, ಕೋ.ಚನ್ನಬಸಪ್ಪ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರ ಹೆಸರೂ ಕೇಳಿಬಂದಿದೆ. 

ಪ್ರತಿ ಬಾರಿ ಸಾಹಿತ್ಯ ಸಮ್ಮೇಳನ ನಡೆದಾಗಲೂ ಚಿದಾನಂದಮೂರ್ತಿ ಅವರ ಹೆಸರು ಕೇಳಿಬರುವುದು, ಕೊನೆ ಕ್ಷಣದಲ್ಲಿ ಅವರ ಹೆಸರು ಕೈಬಿಡುವುದು ಸಂಪ್ರದಾಯವೇ ಆಗಿಹೋಗಿದೆ. ಇನ್ನು ಹಂ.ಪ.ನಾಗರಾಜಯ್ಯ ಅವರು ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸದಸ್ಯತ್ವ ನೋಂದಣಿಯಲ್ಲಿ ಮಾಡಿದ ಅಕ್ರಮಗಳು ಪರಿಷತ್ತಿಗೆ ಆಡಳಿತಾಧಿಕಾರಿಯನ್ನೇ ನೇಮಕ ಮಾಡುವ ಸ್ಥಿತಿ ನಿರ್ಮಾಣ ಮಾಡಿತ್ತು. ಜೊತೆಗೆ ಆಯೋಗ ರಚಿಸಿ ವರದಿ ತರಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹಂಪ ನಾಗರಾಜಯ್ಯ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸಾಧ್ಯವೇ ಇಲ್ಲದ ಮಾತಾಗಿದೆ. 

ಹೀಗಾಗಿ ಈಗ ಕಣದಲ್ಲಿ ಸಿ.ಪಿ.ಕೆ., ಪಂಚಾಕ್ಷರಿ ಹಿರೇವಾಡ, ಕೋ.ಚನ್ನಬಸಪ್ಪ, ಡಾ. ಚಂದ್ರಶೇಖರ ಕಂಬಾರ ಮತ್ತು ನಾಟಕಕಾರ ಗಿರೀಶ್ ಕಾರ್ನಾಡ್ ಅವರಿದ್ದು ಯಾರು ಹಿತವರು ನಿಮಗೆ ಈ ಐವರೊಳಗೆ ಎಂಬ ಪ್ರಶ್ನೆ ಉದ್ಭವಿಸಿದೆ. 

ನವೆಂಬರ್ ೯ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆಯುವ ಮತದಾನದಲ್ಲಿ ಯಾರು ಜಯಶಾಲಿಗಳಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಈ ಸಭೆಯಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಗಡಿನಾಡ ಘಟಕದ ಅಧ್ಯಕ್ಷರು ಸೇರಿ ಒಟ್ಟು ೪೨ ಜನರಿಗೆ ಮತದಾನದ ಹಕ್ಕಿದ್ದು ಯಾರ ಒಲವು ಯಾರ ಕಡೆಗೆ, ಸಮ್ಮೇಳನಾಧ್ಯಕ್ಷತೆ ಯಾರ ಪಾಲಿಗೆ ಎಂಬುದು ನಿರ್ಧಾರವಾಗಲಿದೆ.

ಸಾಹಿತ್ಯ ಪರಿಷತ್ತಿನ ಮೂಲಗಳ ಪ್ರಕಾರ ಕೋ.ಚನ್ನಬಸಪ್ಪ ಅವರ ಬಗ್ಗೆ ಹೆಚ್ಚಿನ ಒಲವು ಕಂಡು ಬಂದಿದೆ. ಆದರೆ, ಈ ವರ್ಷವಷ್ಟೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಚಂದ್ರಶೇಖರ ಕಂಬಾರರನ್ನು ಏಕೆ ಪರಿಗಣಿಸಬಾರದು, ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಸಮ್ಮೇಳನಕ್ಕೆ ಹೆಚ್ಚಿನ ಘನತೆ ಮತ್ತು ಪ್ರಾಮುಖ್ಯತೆ ಬರುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ೭೮ನೇ ಸಾಹಿತ್ಯ ಸಮ್ಮೇಳನದ ಗಾದಿ ಯಾರಿಗೆ ಒಲಿಯುತ್ತದೆಯೋ ಕಾದು ನೋಡಬೇಕು.

 

ಮುಖಪುಟ /ಸುದ್ದಿ ಸಮಾಚಾರ