ಮುಖಪುಟ /ಸುದ್ದಿ ಸಮಾಚಾರ

ಬಳ್ಳಾರಿಯಲ್ಲಿ ಮತ್ತೆ ಮತ ಸಮರ
ಶ್ರೀರಾಮುಲು ಕ್ಷೇತ್ರಕ್ಕೆ ಉಪ ಚುನಾವಣೆ

sriramuluಬೆಂಗಳೂರು, ನ.೧: ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರು ಇದ್ದು, ತಮ್ಮ ಸ್ವಾಭಿಮಾನಕ್ಕೆ ಕುಂದಾಗಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ  ಬಳ್ಳಾರಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ವೇಳಾಪಟ್ಟಿ ಘೋಷಿಸಲಾಗಿದ್ದು, ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ.

ಈ ಸಂಬಂಧ ಇಂದು ಪ್ರಕಟಣೆ ಹೊರಡಿಸಿರುವ ಕೇಂದ್ರ ಚುನಾವಣೆ ಆಯೋಗನವೆಂಬರ್ ೩೦ ರಂದು ಮತದಾನ ಗೊತ್ತುಮಾಡಿದೆ. ನವೆಂಬರ್ ೪ ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಉಮೇದುವಾರಿಕೆ ಸಲ್ಲಿಸಲು ನವೆಂಬರ್ ೧೧ ಕೊನೆಯ ದಿನವಾಗಿದ್ದು, ೧೨ ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ೧೫ ರಂದು ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದು, ನ೩೦ರಂದು ಮತದಾನ ನಡೆಯಲಿದೆ.

ಡಿಸೆಂಬರ್ ೪ ರಂದು ಮತ ಏಣಿಕೆ ನಡೆಯಲಿದ್ದು, ಡಿಸೆಂಬರ್ ೭ ರ ವೇಳೆಗೆ ಇಡೀ ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಕ್ರಮ ಗಣಿಗಾರಿಕೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಬಳ್ಳಾರಿಯಲ್ಲೀಗ ಮತ್ತೊಂದು ಚುನಾವಣಾ ಸಮರಕ್ಕೆ ಅಖಾಡ ಸಜ್ಜಾಗಿದೆ.  ರಾಜ್ಯ ರಾಜಕೀಯ ಮತ್ತೊಮ್ಮೆ ರಂಗೇರುವಂತಾಗಿದೆ.

&&&&&&

ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ಇಲ್ಲ

ಬೆಂಗಳೂರು, ನ.೧: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಕಳಂಕಿತರಾಗಿರುವ ಹಾಗೂ ಅದೇ ಕಾರಣಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಸಿಬಿಐ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದೆ. ಈ ಮಧ್ಯೆ ಶ್ರೀರಾಮುಲು ಹೆಸರೂ ಪ್ರಸ್ತಾಪವಾಗಿದೆ. ಇಂಥ ಸನ್ನಿವೇಶದಲ್ಲಿ ಟಿಕೆಟ್ ನೀಡಿ ಮುಜುಗರಕ್ಕೆ ಒಳಗಾಗಲು ಇಚ್ಛಿಸದ ಬಿಜೆಪಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ.

ಶ್ರೀರಾಮುಲು ಬದಲು ಅವರ ಆಪ್ತ ವಲಯದ ಬೇರೊಬ್ಬರಿಗೆ ಟಿಕೆಟ್ ನೀಡಲು ಬಿಜೆಪಿ ವಲಯದಲ್ಲಿ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಇಂತಹ ಪರಿಸ್ಧಿತಿಯಲ್ಲಿ ಗಣಿ ರೆಡ್ಡಿ ಪಡೆಯ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.

ಮುಖಪುಟ /ಸುದ್ದಿ ಸಮಾಚಾರ