|
ಅಮೆರಿಕೆಯಲ್ಲಿ ಪರಿಮಳಿಸುತ್ತಿರುವ ಮೈಸೂರು ಮಲ್ಲಿಗೆ *ವಾಗ್ಮಿತ್ರ
ಕನ್ನಡನಾಡಿಗೆ ಕಂನಾಡು ಎಂಬ ಹೆಸರೂ ಇದೆ. ಈ ಹೆಸರು ಬಂದಿದ್ದೇ ಕಂಪಿನಿಂದ. ಕಂ ಎಂದರೇ ಕಂಪು. ಕರ್ನಾಟಕದಲ್ಲಿ ಮೈಸೂರು ಮಲ್ಲಿಗೆ ಬಹು ಹೆಸರುವಾಸಿ. ಮಲ್ಲಿಗೆಯ ಪರಿಮಳ ಮನಕ್ಕೆ ಮುದನೀಡುತ್ತದೆ. ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಿರಿಯಕವಿಯೊಬ್ಬರು ಹೇಳಿದ ಮಾತು - ಮಲ್ಲಿಗೆ ಕಂಪು ಬೀರುವುದು ಕರ್ನಾಟಕ ಮಣ್ಣಲ್ಲಿ ಮಾತ್ರವಂತೆ. ಇದೇ ಮಲ್ಲಿಗೆಯ ಬಳ್ಳಿಯನ್ನು ದೂರದ ದೆಹಲಿಯಲ್ಲಿ ನೆಟ್ಟಾಗ ಅದರಲ್ಲಿ ಹೂಬಿಟ್ಟಿತೇ ಹೊರತು ಕಂಪು ಬೀರಲಿಲ್ಲ. ಕನ್ನಡದ ಕೆಂಪು ಹಾಗೂ ಕಪ್ಪು ಮಣ್ಣಿನಲ್ಲಿ ಸುವಾಸನೆ ಬೀರುವ ಶಕ್ತಿಯಿದೆ.
ಕನ್ನಡ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಕಡಲಾಚೆ ಜೀವಂತವಾಗಿಟ್ಟಿರುವ ಕನ್ನಡ ಸಂಸ್ಥೆಗಳಲ್ಲಿ ಮಲ್ಲಿಗೆ ಕನ್ನಡಕೂಟವೂ ಒಂದು. ಅಮೆರಿಕೆಯ ಮಿಡ್ವೆಸ್ಟ್ ಪ್ರಾಂತದಲ್ಲಿರುವ ಮಲ್ಲಿಗೆ ಕನ್ನಡಕೂಟ.. ಕನ್ನಡ ಹಾಗೂ ಕನ್ನಡತನವನ್ನು ಪ್ರಚುರಪಡಿಸುತ್ತಾ, ಕನ್ನಡವನ್ನು ಜೀವಂತವಾಗಿಟ್ಟು, ಮುಂದಿನ ಪೀಳಿಗೆಗೆ ಉಳಿಸುವ ಪಣತೊಟ್ಟಿದೆ.
ಯುಗಾದಿ, ಸಂಕ್ರಾಂತಿ, ರಾಜ್ಯೋತ್ಸವಗಳ ಆಚರಣೆಯ ಜೊತೆಗೆ ಕನ್ನಡ ಸಿನಿಮಾ ಪ್ರದರ್ಶನ ಹಾಗೂ ಕನ್ನಡ ಕುಟುಂಬಗಳೆಲ್ಲವನ್ನೂ ಒಂದೆಡೆ ಸೇರಿಸಿ ಕನ್ನಡ ವಾತಾವರಣ ಸೃಷ್ಟಿಸಲು, ಅಮೆರಿಕೆಯಲ್ಲೇ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ಕನ್ನಡ ಭಾಷೆ ಮರೆಯದಂತೆ ಮಾಡಲು ಪಿಕ್ನಿಕ್ಗಳನ್ನೂ ಏರ್ಪಡಿಸುತ್ತಿದೆ.
ಸುಗಂಧ: ನೂರಾರು ಸದಸ್ಯರನ್ನೊಳಗೊಂಡ ಮಲ್ಲಿಗೆ ಕನ್ನಡ ಕೂಟ, ತಮ್ಮ ಸದಸ್ಯರಲ್ಲಿ ಕನ್ನಡ ಬರವಣಿಗೆ ಹಾಗೂ ತಮ್ಮ ಅನುಭವಾನಿಸಿಕೆಗಳನ್ನು ಪರಸ್ಪರ ಹಂಚಿಕೊಳ್ಳಲು ನೆರವಾಗಲೆಂಬ ಕಾರಣದಿಂದ ಸುಗಂಧ ಎಂಬ ವಾರ್ತಾ ಸಂಚಿಕೆಯನ್ನೂ ಹೊರತರುತ್ತಿದೆ. ಯುಗಾದಿ, ರಾಜ್ಯೋತ್ಸವ ಸಂದರ್ಭಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೂಡ ಕನ್ನಡದ ಹಿರಿಮೆಯನ್ನು ಸಾರುವಂತೆಯೇ ಕಾರ್ಯಕ್ರಮ ಆಯೋಜಿಸುವುದು ಮಲ್ಲಿಗೆ ಕನ್ನಡಕೂಟದ ಹೆಗ್ಗಳಿಕೆ. ಕನ್ನಡ ನಾಡಿನ ವಿವಿಧ ಪ್ರಾಂತಗಳಲ್ಲಿರುವ ವೇಷಭೂಷಣ, ಉಡುಗೆ ತೊಡುಗೆಗಳನ್ನು ಅಮೆರಿಕೆಯಲ್ಲಿ ನೆಲೆಸಿಹ ಕನ್ನಡ ಮಕ್ಕಳಿಗೆ ಹಾಗೂ ಕನ್ನಡೇತರರಿಗೂ ಪರಿಚಯಿಸುವ ಕಾರ್ಯವನ್ನು ಕನ್ನಡಕೂಟ ಮಾಡುತ್ತಿದೆ. ಕೊಡಗಿನ ತೊಡುಗೆ, ಲಂಬಾಣಿ ಉಡುಗೆ, ಕೊರವಂಜಿಯ ನಡಿಗೆ ಹೀಗೆ ಎಲ್ಲ ವಿಧದ ವಸ್ತ್ರ ವಿನ್ಯಾಸಗಳು ಕೂಟದ ಕಾರ್ಯಕ್ರಮಗಳ ಪ್ರಧಾನ ಆಕರ್ಷಣೆ. ಯೋಜನೆಗಳು: ಕಡಲಾಚೆ ಇದ್ದರೂ ಕನ್ನಡದ ಬಗ್ಗೆ ಭಾರೀ ಒಲವುಳ್ಳ ಕೂಟದ ಪದಾಕಾರಿಗಳು, ಸಂಪೂರ್ಣ ಕನ್ನಡದ ವಾರ್ತಾಪತ್ರ ಹೊರತರುವ, ಗಣನೀಯಸೇವೆ ಸಲ್ಲಿಸಿದ ಕನ್ನಡಿಗರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸುವ, ಕರ್ನಾಟಕದಲ್ಲಿರುವ ಅಂಧ, ಕಿವುಡು ಹಾಗೂ ಮೂಕ ಮಕ್ಕಳ ಶಾಲೆಗೆ ಆರ್ಥಿಕ ನೆರವು ನೀಡುವ ಹಾಗೂ ಸ್ಕಾಲರ್ಷಿಪ್ ನೀಡುವ ಯೋಜನೆಗಳನ್ನೂ ಹೊಂದಿದೆ. | |||