|
ಮುಖಪುಟ /ಪ್ರವಾಸಿತಾಣ /ನಮ್ಮದೇವಾಲಯಗಳು
ಸಿಂಹ ವಾಹಿನಿ ನೆಲೆಸಿಹ ಬನಶಂಕರಿ
*ಟಿ.ಎಂ.
ಸತೀಶ್
ಈ ಪ್ರದೇಶ ಸಂಪೂರ್ಣ ಬನಗಳಿಂದ
ಕೂಡಿರುವ ಕಾರಣ ಇಲ್ಲಿ ನೆಲೆಸಿಹ ತಾಯಿಗೂ ಬನಶಂಕರಿ ಎನ್ನುತ್ತಾರೆ.
ಈ ತಾಯಿಗೆ ಸ್ಥಳೀಯರು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ,
ಚೌಡಮ್ಮ, ವನದುರ್ಗೆ ಎಂತಲೂ ಕರೆಯುತ್ತಾರೆ. ಬನಶಂಕರಿ
ನವದುರ್ಗೆಯರದಲ್ಲಿ 6ನೇ ಅವತಾರವೆಂದೂ ಹೇಳಲಾಗುತ್ತದೆ.
ಈ ಪ್ರದೇಶದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ತಾಯಿ ತನ್ನ ತನುವಿನಿಂದ ಕಾಯಿಪಲ್ಲೆ
ಸೃಷ್ಟಿಸಿ ಜನರ ಸಂಕಷ್ಟ ನೀಗಿಸಿದಳಂತೆ ಹೀಗಾಗೇ ಶಾಕಾಂಬರಿ ಎನ್ನುವ ಹೆಸರು ತಾಯಿಗೆ
ಬಂತೆಂದೂ ಅರ್ಚಕರು ಹೇಳುತ್ತಾರೆ. ಈ ಪ್ರದೇಶದ ಜನರು ಪ್ರತಿವರ್ಷ ಮಾಗಿ ಕಾಲದಲ್ಲಿ
ನಡೆಯುವ ರಥೋತ್ಸವದ ಮುನ್ನಾ ದಿನ ತಾಯಿಗೆ 108 ತರಕಾರಿಗಳಿಂದ ಖಾದ್ಯ ತಯಾರಿಸಿ
ಸಮರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಈ
ಸುಂದರ ಕೋಟೆಯಂತೆ ಭಾಸವಾಗುವ ಪ್ರವೇಶ ದ್ವಾರ ದಾಟಿ ಒಳಹೊಕ್ಕರೆ ದೇವಾಲಯ ಕಾಣಸಿಗುತ್ತದೆ. ದೇವಾಲಯದ ಎದುರು ಸುಂದರವಾದ ಕೊಳವಿದೆ. 360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಈ ಕೊಳ ಬನಶಂಕರಿಯಲ್ಲಿ ನೋಡಲೇ ಬೇಕಾದ ರಮಣೀಯ ತಾಣ.
ದೇವಾಲಯದ ಆವರಣದಲ್ಲಿರುವ ಸ್ತಂಭಗಳು ನಯನ ಮನೋಹರವಾಗಿವೆ. ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಪಾರ್ವತಿಯ ಸುಂದರ ಮೂರ್ತಿಯಿದೆ. ದೇವಿಗೆ ಶರಣು ಹೋದರೆ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ವರ್ಷಕ್ಕೊಮ್ಮೆ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಅಂದು ಊರಿಗೆ ಊರೇ ತಳಿರು ತೋರಣಗಳಿಂದ ಅಲಂಕೃತವಾಗುತ್ತದೆ. ದೂರದೂರುಗಳಿಂದ ಆಗಮಿಸುವ ಭಕ್ತರು ಇಲ್ಲಿ ಬಂದು ಬಿಡಾರ ಹೂಡಿ ದೇವಿಯನ್ನು ಪೂಜಿಸುತ್ತಾರೆ. ಬನಶಂಕರಿ ನವದುರ್ಗೆಯರ 6ನೇ ಅವತಾರವಾಗಿದೆ. ಬನಶಂಕರಿ ಬೆಂಗಳೂರಿನಿಂದ 425 ಕಿಲೋ ಮೀಟರ್ ದೂರದಲ್ಲಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಮುಖಪುಟ /ಪ್ರವಾಸಿತಾಣ /ನಮ್ಮ ದೇವಾಲಯಗಳು | |||