|
ಮುಖಪುಟ
/ಪ್ರವಾಸಿತಾಣ
ಇದು ಬೆಂದಕಾಳೂರೋ ಇಲ್ಲ ಬೆಂಗುಳುರೋ? *ಟಿ.ಎಂ.ಸತೀಶ್
ಒಂದು ಉಲ್ಲೇಖದ ರೀತ್ಯ : 12ನೇ ಶತಮಾನದಲ್ಲಿ ಬೇಟೆಗೆಂದು ಬಂದ ಹೊಯ್ಸಳ ವಂಶದ ಅರಸು ಇಮ್ಮಡಿ ವೀರ ಬಲ್ಲಾಳನು ದಾರಿ ತಪ್ಪಿ, ದಾರಿ ಹುಡುಕುತ್ತಾ ಇಲ್ಲಿಗೆ ಬಂದನಂತೆ. ಹಸಿವಿನಿಂದ ಬಳಲುತ್ತಿದ್ದ ಆ ದೊರೆ, ಕಾಡಿನಂಚಿನಲ್ಲಿದ್ದ ಮುದುಕಿಯ ಒಂಟಿ ಗುಡಿಸಿಲ ಬಳಿ ಬಂದು ‘ಅಮ್ಮ ಹಸಿವಿನಿಂದ ಬಳಲುತ್ತಿದ್ದೇನೆ. ತಿನ್ನಲು ಏನಾದರೂ ಕೊಡಿ’ ಎಂದು ಕೇಳಿದನಂತೆ. ಆ ಬಡ ಮುದುಕಿ , ಮನೆಯಲ್ಲಿದ್ದ ಬೆಂದಕಾಳುಗಳನ್ನೇ ರಾಜನಿಗೆ ನೀಡುತ್ತಾಳೆ. ಬೆಂದಕಾಳು ತಿಂದು ನೀರು ಕುಡಿದ ವೀರ ಬಲ್ಲಾಳ ಮುದುಕಿಯ ಆತಿಥ್ಯದಿಂದ ಪ್ರೀತನಾಗಿ ಬೆಂದ ಕಾಳು ನೀಡಿ ತನ್ನ ಹಸಿವು ನೀಗಿಸಿದ ಊರಿಗೆ ಬೆಂದಕಾಳೂರು (ಬೇಕ್ಡ್ ಬೀನ್ಸ್) ಎಂದೇ ನಾಮಕರಣ ಮಾಡಿದ. ಉತ್ತರೋತ್ತರದಲ್ಲಿ ಬೆಂದಕಾಳೂರು ಬೆಂಗಳೂರಾಯ್ತಂತೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ. ಮತ್ತೊಂದು ಕಥೆಯ ರೀತ್ಯ: ಬೆಂಗಳೂರಿನ ನಿರ್ಮಾತೃ ಹಿರಿಯ ಕೆಂಪೇಗೌಡರು ದಟ್ಟವಾಗಿದ್ದ ಕಾಡು ಕಡಿಸಿ, ಸುಡಿಸಿ ಒಂದು ನಗರ ಕಟ್ಟಿದರಂತೆ. ಕಾಡು ಸುಡಿಸಿ ಗೌಡರು ನಾಡು ಕಟ್ಟಿದೂರಿನಲ್ಲಿ ವಾಸಿಸಲು ಬಂದ ಜನರು ಆ ಊರನ್ನು ‘ಬೆಂದಕಾಡೂರು’ ಎಂದೇ ಕರೆಯುತ್ತಿದ್ದರು. ಮುಂದೆ ಅದು ಬೆಂಗಾಡೂರಾಗಿ, ಬೆಂಗಾಳೂರಾಗಿ ಕೊನೆಗೆ ಬೆಂಗಳೂರಾಯಿತು. ಮಗದೊಂದು ಕಥೆಯ ರೀತ್ಯ:ವಿಷ್ಣುಭಕ್ತರಾಗಿದ್ದ ವಿಜಯನಗರದರಸರನ್ನು ಮೆಚ್ಚಿಸುವ ಸಲುವಾಗಿ ಕೆಂಪೇಗೌಡರು, ಬೆಂಗಳೂರಿನ ಹಲವು ಕಡೆ ವೆಂಕಟರಮಣನ ದೇವಾಲಯಗಳನ್ನು ಕಟ್ಟಿಸಿದರು. ವೆಂಕಟರಮಣನ ದೇಗುಲಗಳ ನಗರಿಗೆ ವೆಂಕಟೂರು ಎಂದೂ ಕರೆದರು. ವಕಾರದ ಬದಲಿಗೆ ಬಕಾರ ಹಾಗೂ ಕಕಾರದ ಜಾಗದಲ್ಲಿ ಗಕಾರ ಬಂದು ವೆಂಕಟೂರು ಬೆಂಗಳೂರಾಯಿತು.
ಯಲಹಂಕ ಪ್ರಭುಗಳು, ಮೈಸೂರು ಒಡೆಯರು, ಮೊಗಲರು, ಹೊಯ್ಸಳರು, ಗಂಗರೆ ಮೊದಲಾದ ಅರಸು ಮನೆತನಗಳು ಆಳಿದ ಬೆಂಗಳೂರು ಇಂದು ತನ್ನ ಹಲವಾರು ವಿಶೇಷಗಳಿಂದ ವಿಶ್ವದ ಗಮನವನ್ನು ಸೆಳೆದಿದೆ. ಸೊಗಸಾದ ಹವಾಗುಣ ಹೊಂದಿರುವ ಬೆಂಗಳೂರು ಏರ್‌ಕಂಡೀಷನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕ್ರೀಡೆ, ಸಂಸ್ಕೃತಿಯ ತವರಾದ ಬೆಂಗಳೂರು, ವಿಜ್ಞಾನ – ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯಿಂದ ವಿಶ್ವದ ಗಮನವನ್ನೇ ಸೆಳೆದಿದೆ. ಈಗ ಭಾರತಕ್ಕೆ ಯಾರೇ ವಿದೇಶೀ ಗಣ್ಯರು ಬಂದರೂ ಬೆಂಗಳೂರಿಗೆ ಅದರಲ್ಲೂ ವಿಪ್ರೋ, ಇನ್‌ಫೋಸಿಸ್‌ಗೆ ಭೇಟಿ ನೀಡದೆ ಹೋಗುವುದೇ ಇಲ್ಲ. ಬೆಂಗಳೂರು, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ವಾಣಿಜ್ಯ ನಗರಿಯಾಗಿದೆ. ಈಗ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಸಿಲಿಕಾನ್ ನಗರಿ ಎಂಬ ಹೆಸರನ್ನೂ ಪಡೆದಿದೆ. ಬೃಹತ್ ಕೈಗಾರಿಕೆಗಳ ತವರಾಗಿ, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿದ ಪ್ರಮುಖ ಪಟ್ಟಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ಸೌಕರ್ಯವಿರುವ ಬೃಹತ್ ಬೆಂಗಳೂರಾಗಿದೆ. ಸ್ವಾಭಾವಿಕ ಕೆರೆಗಳು, ಐತಿಹಾಸಿಕ ಸ್ಮಾರಕಗಳು, ಕೋಟೆ ಕೊತ್ತಲ, ಅರಮನೆ, ಭವ್ಯ ಸೌಧಗಳು, ಕಬ್ಬನ್‌ಪಾರ್ಕ್, ಲಾಲ್‌ಬಾಗ್, ಗುಡಿ ಗೋಪುರಗಳನ್ನು ಹೊಂದಿರುವ ಬೆಂಗಳೂರು ದೇಶ ವಿದೇಶಗಳ ಪ್ರವಾಸಿಗರನ್ನೂ ಕೈಬೀಸಿ ಕರೆಯುತ್ತಿದೆ. ಬೆಂಗಳೂರು ಇತಿಹಾಸ : ಗಂಗ, ಕದಂಬ, ಚಾಲುಕ್ಯ, ಒಡೆಯರಾಳಿದ ಈ ನಗರವನ್ನು ಚಿಕ್ಕದೇವರಾಯರಿಂದ ಮೊಗಲ್ ಚಕ್ರವರ್ತಿ ಔರಂಗಜೇಬ್ (ತನ್ನ ಪ್ರತಿನಿಧಿ ಖಾಸಿಂ ಖಾನರ ಮೂಲಕ) ಕೊಂಡುಕೊಂಡದ್ದೂ ಉಂಟು. ರಾಜರಾಳ್ವಿಕೆಗೆ ಒಳಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಹಲವು ಕೋಟೆ ಮತ್ತು ಸುಂದರ ಅರಮನೆಗಳೂ ಇವೆ. ಈ ಪೈಕಿ, ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಬೆಂಗಳೂರು ಅರಮನೆ ಹಾಗೂ ಟಿಪ್ಪೂ ಸುಲ್ತಾನರ ಬೇಸಿಗೆ ಅರಮನೆ ಪ್ರಮುಖವಾದವು. ಇದಲ್ಲದೆ ಬೆಂಗಳೂರಿನಲ್ಲಿ ನೋಡಲೇಬಾಕಾದ ಸ್ಥಳಗಳು ಹಲವಾರು.
ಕಬ್ಬನ್‌ಪಾರ್ಕ್: 1864ರಷ್ಟು ಹಳೆಯದಾದ ಕಬ್ಬನ್‌ಪಾರ್ಕ್ ಬೆಂಗಳೂರು ನಗರದ ಕೇಂದ್ರ ಹಾಗೂ ಹೃದಯಭಾಗದಲ್ಲಿರುವ ಸುಂದರ ಉದ್ಯಾನ. ವಿಧಾನ ಸೌಧದ ಎದುರು ಹಾಗೂ ಉಚ್ಚ ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ಇರುವ ಈ ಉದ್ಯಾನದಲ್ಲಿ ಬಾಲಭವನ, ಪುಟಾಣಿ ರೈಲು, ಕಾರಂಜಿ, ಮ್ಯೂಜಿಯಂ, ಮತ್ಸ್ಯಾಲಯ, ವಿವಿಧ ಬಗೆಯ ಆಧುನಿಕ ಯಂತ್ರಚಾಲಿತ ಆಟಿಕೆಗಳು, ವಿಶ್ವೇಶ್ವರಾಯ ತಾಂತ್ರಿಕ ವಸ್ತು ಸಂಗ್ರಹಾಲಯ, ಸರ್ಕಾರಿ ವಸ್ತುಸಂಗ್ರಹಾಲಯಗಳಿವೆ.
ಚೈತ್ರಮಾಸದ ಹುಣ್ಣಿಮೆಯ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ಬೆಳಗಾಗುವ ತನಕ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಟನ್‌ಪೇಟೆಯಲ್ಲಿರುವ ಮಸ್ತಾನ್ ದರ್ಗಕ್ಕೂ ಭೇಟಿ ನೀಡಿ, ಬೆಳಗ್ಗೆ ಹೊತ್ತಿಗೆ ಧರ್ಮರಾಯನ ದೇವಾಲಯಕ್ಕೆ ವಾಪಸಾಗುತ್ತದೆ ಹಜರತ್ ತವಾಕಲ್ ಮಸ್ತಾನ್ ದರ್ಗಾ: ಕಾಟನ್‌ಪೇಟೆಯಲ್ಲಿರುವ ಮಸ್ತಾನ್ ದರ್ಗಕ್ಕೂ ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೂ ಅವಿನಾಭಾವ ಸಂಬಂಧ ಇದೆ. ಸೂಫಿ ಪಂಥದ ತವಾಕಲ್ ಮಸ್ತಾನರ ಈ ದರ್ಗಕ್ಕೆ ಪ್ರತಿ ವರ್ಷ ಕರಗ ಉತ್ಸವ ಭೇಟಿ ನೀಡುತ್ತದೆ. ಕೋಮು ಸೌಹಾರ್ದದ ಸಂಕೇತವಾಗಿರುವ ಈ ದರ್ಗಕ್ಕೆ ಮುಸ್ಲಿಮ್ ಮತ್ತು ಮುಸ್ಲಿಮೇತರರೂ ಭೇಟಿ ನೀಡುತ್ತಾರೆ.
ಈ ದೇಗುಲದಲ್ಲಿ ಪ್ರತಿವರ್ಷ ಜನವರಿ ತಿಂಗಳಿನ 13 ಅಥವಾ 14ರಂದು ಅಸ್ತಮಿಸುವ ಸೂರ್ಯಕಿರಣ ಪಶ್ಚಿಮ ಭಾಗದ ಕಿಟಕಿಯಿಂದ ತೂರಿ ಬಸವಣ್ಣನ ಕೋಡುಗಳ ನಡುವೆ ಹಾದು ಶಿವಲಿಂಗದ ಮೇಲೆ ಬೀಳುತ್ತದೆ.
ಸಂಗೀತ ನೃತ್ಯ ಕಾರಂಜಿ: ಗವಿಗಂಗಾಧರೇಶ್ವರ ದೇವಾಲಯದ ದಕ್ಷಿಣ ಭಾಗದಲ್ಲಿರುವ ಹರಿಹರೇಶ್ವರ ಗುಡ್ಡ, ಬೆಂಗಳೂರಿನ ಮಾಜಿ ಮೇಯರ್ ಕೆ. ಚಂದ್ರಶೇಖರ್ ಅವರ ಪರಿಶ್ರಮದ ಫಲವಾಗಿ ಸುಂದರ ಉದ್ಯಾನವಾಗಿ ಮಾರ್ಪಟ್ಟಿದೆ. ತಿಮ್ಮೇಶಪ್ರಭು ಉದ್ಯಾನ ಎಂದೇ ಕರೆಯಲಾಗುವ ಈ ಉದ್ಯಾನದಲ್ಲಿ ಸಂಗೀತ ಕಾರಂಜಿಯೂ ಇದೆ. ಪ್ರತಿ ಭಾನುವಾರ ಸಂಜೆ ಇಲ್ಲಿ ಉಚಿತವಾಗಿ ಸಂಗೀತ ಕಾರಂಜಿಯ ನೃತ್ಯವನ್ನು ನೋಡಬಹುದು.
ಜುಮ್ಮಾ ಮಸೀದಿ: ಸಿಟಿ ಮಾರ್ಕೆಟ್ ಅಥವಾ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರದೇಶದಲ್ಲಿರುವ ಈ ಮಸೀದಿ ನಗರದ ಅತಿ ಪುರಾತನ ಮಸೀದಿಗಳಲ್ಲಿ ಒಂದು. ತಾರಾಲಯ: ಜವಾಹರಲಾಲ್ ತಾರಾಲಯ ಅರ್ಥಾತ್ ಪ್ಲಾನಿಟೋರಿಯಂ ರಾಜಭವನದ ಹಿಂಭಾಗದಲ್ಲಿದೆ. ಖಗೋಳ ವಿಜ್ಞಾನದ ಎಲ್ಲ ಆಗು ಹೋಗುಗಳ ಬಗ್ಗೆ ಆಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ಈ ಸಂಸ್ಥೆಯಲ್ಲಿ ಹಗಲಲ್ಲೇ ಸೂರ್ಯಚಂದ್ರ, ಗ್ರಹತಾರೆಗಳೂ ಗೋಚರಿಸುತ್ತವೆ. ರವೀಂದ್ರ ಕಲಾಕ್ಷೇತ್ರ: ರಂಗ ಕಲೆಯನ್ನು ಬೆಂಗಳೂರಿನಲ್ಲಿ ಜೀವಂತವಾಗಿ ಉಳಿಸಿರುವ ಕಲಾ ದೇಗುಲವೇ ರವೀಂದ್ರ ಕಲಾಕ್ಷೇತ್ರ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ರವೀಂದ್ರನಾಥ ಠಾಕೂರ್ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಕಟ್ಟಿದ ರಂಗಮಂದಿರಕ್ಕೆ ರವೀಂದ್ರ ಕಲಾಕ್ಷೇತ್ರ ಎಂದೇ ಹೆಸರಿಡಲಾಗಿದೆ. ಈಗ ನವೀನಕರಣಗೊಂಡು ಕಲಾಕ್ಷೇತ್ರ ಹೊಸರಂಗು ಪಡೆದಿದೆ. ಇದರ ಅಕ್ಕಪಕ್ಕದಲ್ಲಿ ಪುರಭವನ ಮತ್ತು ಕನ್ನಡ ಭವನಗಳಿವೆ. ಹಿಂಬದಿಯಲ್ಲಿ ಸಂಸ ಬಯಲು ರಂಗಮಂದಿರವೂ ಇದೆ. ಸೇಂಟ್ ಮೇರೀಸ್ ಚರ್ಚ್: ಪ್ರೆಂಚ್ ಮೆಷನರಿ 1811ರಲ್ಲಿ ಸ್ಥಾಪಿಸಿದ ಈ ಚರ್ಚ್ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಇದೆ. ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಇಲ್ಲಿ ಸಂತ ಮೇರಿ ಅಮ್ಮ ಜಾತ್ರೆ ನಡೆಯುತ್ತದೆ. ಹಲಸೂರು ಕೆರೆ: ಬೋಟಿಂಗ್‌ನಿಂದ ಖ್ಯಾತವಾಗಿರುವ ಹಲಸೂರು ಕೆರೆ ಬೆಂಗಳೂರಿನ ಪಿಕ್‌ನಿಕ್ ತಾಣಗಳಲ್ಲೊಂದು. ಜನಾಕರ್ಷಣೆಯ ಕೇಂದ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಇರುವ ಈ ಕೆರೆ, ಪುಟ್ಟದೊಂದು ದ್ವೀಪದಂತಿದೆ. ಚೌಡಯ್ಯ ಸ್ಮಾರಕ ಭವನ: ನಾಲ್ಕು ತಂತಿಗಳ ಪಿಟೀಲಿಗೆ 7 ತಂತಿಗಳನ್ನು ಅಳವಡಿಸಿದ ಖ್ಯಾತ ಪಿಟೀಲು ವಿದ್ವಾಂಸ ಟಿ. ಚೌಡಯ್ಯನವರ ಸ್ಮರಣಾರ್ಥ ಪಿಟೀಲಿನ ಮಾದರಿಯಲ್ಲೇ ಕಟ್ಟಿಸಿದ ಕಟ್ಟಡವೇ ಚೌಡಯ್ಯ ಸ್ಮಾರಕ ಭವನ. ಇಲ್ಲಿ ಹಲವು ವಿಧದ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ. ಟಿಪ್ಪೂ ಬೇಸಿಗೆ ಅರಮನೆ: ಬೆಂಗಳೂರಿನ ಕೋಟೆ ಪ್ರದೇಶದಲ್ಲಿ ವೆಂಕಟರಮಣ ದೇವಾಲಯದ ಹಿಂಭಾಗದಲ್ಲೇ ಇರುವ ಟಿಪ್ಪೂ ಬೇಸಿಗೆ ಅರಮನೆ ನಿರ್ಮಾಣವಾದದ್ದು 1791ರಲ್ಲಿ. ಎರಡು ಅಂತಸ್ತಿನ ಈ ಅರಮನೆಯನ್ನು ಮರದಿಂದ ನಿರ್ಮಿಸಲಾಗಿದೆ. ಹೈದರಾಲಿ ಹಾಗೂ ಟಿಪ್ಪೂ ಆಡಳಿತ ಕಾಲದ ವಸ್ತು ಸಂಗ್ರಹಾಲಯವೂ ಇಲ್ಲಿದೆ. ರಾಗಿಗುಡ್ಡ: ಬೆಂಗಳೂರಿನ ಜಯನಗರ 9ನೇ ಬ್ಲಾಕ್‌ನಲ್ಲಿರುವ 58 ಅಡಿಗಳ ಹೆಬ್ಬಂಡೆಯೇ ರಾಗಿಗುಡ್ಡ. ಈ ಗುಡ್ಡದ ಮೇಲೆ ಆಂಜನೇಯನ ದೇವಾಲಯವಿದೆ. ಐದೂವರೆ ಎಕರೆ ವಿಶಾಲ ಭೂಭಾಗದಲ್ಲಿರುವ ಈ ದೇಗುಲ ಬೆಂಗಳೂರಿನ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿ ಪಾವನಗಂಗಾ ಎಂಬ ಜಲಧಾರೆಯೂ ಇದೆ. ತ್ರಿಮೂರ್ತಿಗಳ ಮೂರ್ತಿಯೂ ಇದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||