ಮುಖಪುಟ /ಪ್ರವಾಸಿತಾಣ  

ಕರುನಾಡ ಮಸ್ಸೂರಿ ಗಿರಿಧಾಮಗಳ ರಾಜ ನಂದಿ ಬೆಟ್ಟ
ಅರ್ಕಾವತಿ
, ದಕ್ಷಿಣ ಪೆನ್ನಾರ್ ನದಿಯ ಉಗಮ ಸ್ಥಾನ...

*ಟಿ.ಎಂ. ಸತೀಶ್

Nandi Hillsಕರ್ನಾಟಕ ಪ್ರಾಕೃತಿಕವಾಗಿ ಸಂಪದ್ಭರಿತವಾದ ನಾಡು. ಮಲೆನಾಡಿನಿಂದ ಕೂಡಿದ ಸಿರಿ ನಾಡು. ಶ್ರೀಗಂಧದ ಬೀಡು. ಧುಮ್ಮಿಕ್ಕುವ ಜಲಪಾತ, ವನ್ಯಮೃಗಗಳಿಂದ ತುಂಬಿದ ನಾಗರಹೊಳೆ, ಬಂಡೀಪುರವಿರುವ ಕರುನಾಡು. ಕುಲು ಮನಾಲಿ, ಮಸ್ಸೂರಿಯ ಚೆಲುವನ್ನು, ಸೊಬಗನ್ನು ನೆನಪಿಸುವ ತಾಣಗಳೂ ಕರ್ನಾಟಕದಲ್ಲಿವೆ. ಇಂಥ ಗಿರಿಧಾಮಗಳಲ್ಲಿ ಒಂದು ಬೆಂಗಳೂರಿನಿಂದ ೬೦ ಕಿ.ಮಿ. ದೂರು ಇರುವ ನಂದಿ ಬೆಟ್ಟ. ಸಮುದ್ರಮಟ್ಟದಿಂದ ೪೮೫೧ ಅಡಿ ಎತ್ತರದಲ್ಲಿರುವ ನಂದಿಬೆಟ್ಟ ಬೇಸಿಗೆಯಲ್ಲಿ ತಂಪಾಗಿರುವುದರಿಂದಲೇ ಮೈಸೂರು ಹುಲಿ ಟಿಪ್ಪೂ ಸುಲ್ತಾನರು ಈ ತಾಣಕ್ಕೆ ಮನಸೋತಿದ್ದು. ಹೀಗಾಗೇ ಟಿಪ್ಪೂ ಸಂಸಾರ ಸಮೇತ ಬಿರು ಬೇಸಿಗೆಯಲ್ಲಿ ನಂದಿಗೆ ಬಂದು ಬಿಡಾರ ಹೂಡುತ್ತಿದ್ದರು ಎನ್ನುತ್ತದೆ ಇತಿಹಾಸ. ಟಿಪ್ಪೂ ಬೇಸಿಗೆ ಬಂಗಲೆ, ಟಿಪ್ಪೂ ಕಾಲದ ರಕ್ಷಣಾ ಗೋಡೆಗಳು ಇಂದಿಗೂ ಇಲ್ಲಿ ಅದಕ್ಕೆ ಸಾಕ್ಷಿಯಾಗಿವೆ.

ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ಈ ಸುಂದರ ಗಿರಿಧಾಮ ವಾರಾಂತ್ಯದ ಪಿಕ್‌ನಿಕ್ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ತಂಪಾದ ಹಾಗೂ ಅಹ್ಲಾದಕರ ವಾತಾವರಣ, ಪ್ರಕೃತಿಯ ರಮಣೀಯತೆ ಯುವಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ನಂದಿಗ್ರಾಮದಲ್ಲಿ ಭೋಗನಂದೀಶ್ವರನ ದರ್ಶನ ಪಡೆದು ೮ ಕಿ.ಮಿ. ಎತ್ತರದ ದಾರಿಯಲ್ಲಿ ಬೆಟ್ಟವನ್ನು ಬಳಸಿ ಸಾಗುವುದು ರೋಮಾಂಚಕಾರಿ ಅನುಭವ.

ಐತಿಹ್ಯ: ನಂದಿ ಎಂದರೆ ಬಸವ, ಬಸವನಿಗೂ ಈ ಬೆಟ್ಟಕ್ಕೂ ಏನು ಸಂಬಂಧ? ಈ ಪ್ರಶ್ನೆ ಸಹಜವಾಗೇ ಉದ್ಭವಿಸುತ್ತದೆ. ನಂದಿಬೆಟ್ಟ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆಯೇ ಜಿಜ್ಞಾಸೆ ಇದೆ. ಚೋಳರ ಕಾಲದಲ್ಲಿ ಈ ಬೆಟ್ಟವನ್ನು ಆನಂದಗಿರಿ ಎಂದು ಕರೆಯುತ್ತಿದ್ದರು. ಬೇಸಿಗೆಯಲ್ಲಿ ತಂಪಾದ ಈ ಸ್ಥಳ ಆನಂದ ತರುತ್ತಿದ್ದ ಕಾರಣ ಇದನ್ನು ಆನಂದ ಗಿರಿ ಎನ್ನುತ್ತಿದ್ದರು ಎಂಬುದು ಊರಿನ ಹಿರೀಕರ ಹೇಳಿಕೆ. ಯೋಗನಂದೀಶ್ವರರು ಇಲ್ಲಿ ತಪವನ್ನಾಚರಿಸಿದ್ದರಿಂದ ಇದಕ್ಕೆ ನಂದಿಬೆಟ್ಟ ಎಂದು ಹೆಸರು ಬಂತು ಎನ್ನುತ್ತದೆ ಐತಿಹ್ಯ.

ಬೆಟ್ಟದ ಮೇಲೆ ಯೋಗ ನಂದೀಶ್ವರ ದೇವಾಲಯ, ಸುಂದರವಾದ ಕಲ್ಯಾಣಿ, ಕೆಳಗೆ ಭೋಗ ನಂದೀಶ್ವರ ದೇವಾಲಯವಿರುವ ಕಾರಣ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂದು ಹೆಸರಾಯ್ತು ಎಂಬುದು ಮತ್ತೊಂದು ವಾದ. ಇಲ್ಲಿ ಟಿಪ್ಪು ಕೋಟೆ ಕಟ್ಟಿದ ಕಾರಣ ಇದನ್ನು ನಂದಿದುರ್ಗ ಎಂದೂ ಕರೆಯುತ್ತಾರೆ.

Nandi Fort ನೋಡಬೇಕಾದ ತಾಣಗಳು: ಧುಮ್ಮಿಕ್ಕುವ ಜಲಧಾರೆ, ಚಿಕ್ಕ ಚಿಕ್ಕ ಝರಿ, ೬೦೦ ಮೀಟರ್ ಆಳದ ಟಿಪ್ಪೂ ಡ್ರಾಪ್ (ಪ್ರಪಾತ), ತಿಳಿನೀರಿನಿಂದ ತುಂಬಿದ ಸುಂದರ ಕೊಳ - ಅಮೃತ ಸರೋವರ, ಪಾಲಾರ್, ಅರ್ಕಾವತಿ, ದಕ್ಷಿನ ಪೆನ್ನಾರ್ ನದಿಗಳ ಉಗಮಸ್ಥಾನ, ಅರಸರು ಶತ್ರುಗಳಿಂದ ತಪ್ಪಿಸಿಕೊಳ್ಳಲು ನಿರ್ಮಿಸಿದ್ದ ಗುಪ್ತದಾರಿ, ವಿಶಾಲವಾದ ಮಕ್ಕಳ ಆಟದ ಮೈದಾನ, ಟಿಪ್ಪು ಕೋಟೆ, ಯೋಗನಂದೀಶ್ವರ ಹಾಗೂ ಭೋಗ ನಂದೀಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಆದರೆ ಬೆಟ್ಟದ ಮೇಲಿರುವ ಕೋಟೆಯ ಗೋಡೆಗಳು ಹಲವೆಡೆ ಬಿದ್ದು ಹೋಗಿವೆ. ಹತ್ತಿರ ಹೋಗುವುದು ಬಲು ಅಪಾಯಕಾರಿ. ಇಲ್ಲಿ ತಿಂಡಿ ತಿನಿಸುಗಳು ಬಲು ದುಬಾರಿ. ಎಲ್ಲ ಅಂಗಡಿಗಳಲ್ಲೂ ತಂಪು ಪಾನೀಯ, ಪ್ಯಾಕ್ ಮಾಡಿದ ತಿನಿಸುಗಳಿಗೆ ಎಂ.ಆರ್.ಪಿ.ಗಿಂತ ಹೆಚ್ಚಿನ ಹಣ ಸುಲಿಯುತ್ತಾರೆ. ಕಾನೂನು ರೀತ್ಯ ಇದು ಅಪರಾಧವಾದರೂ ಇಲ್ಲಿ ನಿರಂತರವಾಗಿ ನಡೆದಿದೆ.

ಸುತ್ತಮುತ್ತ ಏನಿದೆ : ಇಲ್ಲಿಂದ ೨೧ ಕಿ.ಮಿ. ದೂರದಲ್ಲಿ ಕನ್ನಡದ ಕಣ್ಮಣಿ ಭಾರತರತ್ನ ಎಸ್.ಎಂ. ವಿಶ್ವೇಶ್ವರಾಯನವರ ಜನ್ಮಸ್ಥಳ ಮುದ್ದೇನಹಳ್ಳಿ ಇದೆ. ದೇವನಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಿದರೆ ದೇವನಹಳ್ಳಿಯಲ್ಲಿ ಸುಂದರ ಕೋಟೆಯನ್ನೂ ನೋಡಬಹುದು. ಬೆಂಗಳೂರು, ಚಿಕ್ಕಬಳ್ಳಾಪುರಗಳಿಂದ ನಂದಿಗೆ ನೇರ ಬಸ್ ಸೌಕರ್ಯ ಇದೆ. ನಂದಿಯಲ್ಲಿ ತಂಗಲು ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆಗಳ ವಸತಿಗೃಹಗಳೂ ಇವೆ. ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆದ ಸಂದರ್ಭದಲ್ಲಿ ಗಣ್ಯರಿಗಾಗಿ ಈ ಗಿರಿಧಾಮವನ್ನು ಅಭಿವೃದ್ಧಿಪಡಿಸಲಾಯಿತು.

ಹೆಚ್ಚಿನ ಮಾಹಿತಿಗೆ ಹಾಗೂ ಕೊಠಡಿ ಕಾಯ್ದಿರಿಸಲು ಸಂಪರ್ಕಿಸಬೇಕಾದ ವಿಳಾಸ: ನಿರ್ದೇಶಕರು, ತೋಟಗಾರಿಕೆ ಇಲಾಖೆ, ಲಾಲ್‌ಬಾಗ್, ಬೆಂಗಳೂರು. ದೂರವಾಣಿ ೦೮೦-೨೬೫೭೯೨೩೧ ಅಥವಾ ವಿಶೇಷಾಕಾರಿ, ನಂದಿಗಿರಿಧಾಮ, ಚಿಕ್ಕಬಳ್ಳಾಪುರ ತಾಲೂಕ್, ಕೋಲಾರ ಜಿಲ್ಲೆ. ದೂರವಾಣಿ :೦೮೧೫೬-೨೬೭೮೬೨೧  

ಮುಖಪುಟ /ಪ್ರವಾಸಿತಾಣ