|
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು.... *ಟಿ.ಎಂ. ಸತೀಶ್
ಇಂಥ ಒಂದು ಕಲಾಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹಲ್ಲುಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾಲೋಕವೇ ತೆರೆದುಕೊಳ್ಳುತ್ತದೆ. ಜೀವಕಳೆಯಿಂದ ಕಂಗೊಳಿಸುತ್ತಿರುವ ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ, ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ.
ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯದ ಆವರಣ ಭಿತ್ತಿಗಳ ಏಳಂಗುಲದ ಪಟ್ಟಿಕೆಗಳಲ್ಲಿ ರಾಮಾಯಣ, ಭಾಗವತ, ಮಹಾಭಾರತದ ಕಥೆಯನ್ನು ವರ್ಣಿಸುವ ಶಿಲ್ಪಗಳಿಂದ ತುಂಬಿದೆ. ಆನೆ, ಅಶ್ವಾರೋಹಿಗಳು, ಲತೆ, ಮಕರ, ಹಂಸಗಳಿವೆ. ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ನಾರಸಿಂಹ, ಮನ್ಮಥ, ಇಂದ್ರ, ಸರಸ್ವತಿ, ಮಹಿಷಾಸುರ ಮರ್ದಿನಿ ಮೊದಲಾದ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಈ ವಿಗ್ರಹಗಳ ಪೀಠದ ಮೇಲೆ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ ಮೊದಲಾದ ಹೆಸರುಗಳಿದ್ದು, ಇವರೆ ಇವನ್ನು ಕೆತ್ತಿದ್ದು ಎಂದು ಸೂಚಿಸಲಾಗಿದೆ.
ಈ ಶಿಲ್ಪಕಲಾಮಯ ದೇಗುಲದ ಪ್ರಮುಖವಾದ ತಾಂಡವ ಗಣಪತಿಯ ಶಿಲ್ಪ ಗಮನಾರ್ಹವಾದುದು. ಕೇಶವ ದೇವಾಲಯಕ್ಕೆ ಈಶಾನ್ಯದಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಹೊಯ್ಸಳ ದೇವಾಲಯಗಳಲ್ಲಿಯೇ ಇದೊಂದು ಅಪೂರ್ವ ಮಾದರಿ. ಇಂದು ಈ ದೇವಾಲಯದಲ್ಲಿ ಹಲವು ಭಗ್ನಗೊಂಡ ವಿಗ್ರಹಗಳನ್ನು ಕಂಡಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. 19ನೆಯ ಶತಮಾನದಲ್ಲಿ ಆಂಗ್ಲವಿದ್ವಾಂಸರು ಈ ದೇವಾಲಯದ ಶಿಲ್ಪಕಲಾವೈಭವ ಕಂಡು ಅದರ ಮಾಹಿತಿ ಮುದ್ರಿಸಿದ ಕಾರಣ, ಅಂದಿನ ಮೈಸೂರು ಅರಸರು ಈ ದೇವಾಲಯವನ್ನು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದರು. 1924ರಲ್ಲಿ ಬಿದ್ದುಹೋಗಿದ್ದ ಗೋಡೆಗಳ ದುರಸ್ತಿ ಮಾಡಿ, ದೇವಾಲಯ ಶಿಥಿಲವಾಗದಂತೆ ಭದ್ರಗೊಳಿಸಲಾಯಿತು. 1953ರಲ್ಲಿ ಈ ದೇವಾಲಯದ ಒಳಭಾಗದ ಅಪರಿಮಿತ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲೆಂದು ವಿದ್ಯುದ್ದೀಪದ ವ್ಯವಸ್ಥೆ ಮಾಡಲಾಗಿದೆ. ಹೋಗುವುದು ಹೇಗೆ? ಮೈಸೂರಿನಿಂದ ಸೋಮನಾಥಪುರಕ್ಕೆ 42 ಕಿ.ಮೀ. ಬೆಂಗಳೂರಿನಿಂದ ಇಲ್ಲಿಗೆ 125 ಕಿ.ಮೀ. ನೇರ ಬಸ್ ಸೌಕರ್ಯವೂ ಇದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in | |||